

ಲಖನೌ: ಆಸ್ಟ್ರೆಲಿಯಾದ ಯುವ ಬ್ಯಾಟರ್ ಜಾರ್ಜಿಯಾ ವೋಲ್ (99*ರನ್, 56 ಎಸೆತ, 17 ಬೌಂಡರಿ, 1 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಬಲದಿಂದ ಯುಪಿ ವಾರಿಯರ್ಸ್ ತಂಡ ಹರಿಸಿದ ರನ್ಮಳೆ ಎದುರು ಮಂಕಾದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯಲ್ಲಿ 12 ರನ್ಗಳಿಂದ ವೀರೋಚಿತ ಸೋಲು ಕಂಡಿದೆ. ಇದರೊಂದಿಗೆ ಆರ್ಸಿಬಿ ತಂಡ ಪ್ಲೇಆ್ ರೇಸ್ನಿಂದ ಹೊರಬಿದ್ದು ಪ್ರಶಸ್ತಿ ಉಳಿಸಿಕೊಳ್ಳಲು ವಿಫಲವಾಗಿದ್ದರೆ, ಯುಪಿ ವಾರಿಯರ್ಸ್ ತಂಡ ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ. ಜತೆಗೆ ಡೆಲ್ಲಿ ನಂತರ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಪ್ಲೇಆಫ್ ಪ್ರವೇಶವೂ ಖಚಿತಗೊಂಡಿದೆ.
ಏಕನಾ ಸ್ಟೇಡಿಯಂನಲ್ಲಿ ಶನಿವಾರ ನಡೆದ ಲಖನೌ ಚರಣದ ಕೊನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಯುಪಿ 5 ವಿಕೆಟ್ಗೆ 225 ರನ್ ಕಲೆಹಾಕಿತು. ಇದು ಡಬ್ಲ್ಯುಪಿಎಲ್ನಲ್ಲಿ ಸರ್ವಾಧಿಕ ಮೊತ್ತವಾಗಿದೆ. 2023ರಲ್ಲಿ ಆರ್ಸಿಬಿ ವಿರುದ್ಧ ಡೆಲ್ಲಿ 223 ರನ್ ಗಳಿಸಿದ್ದು ಹಿಂದಿನ ಗರಿಷ್ಠ. ಪ್ರತಿಯಾಗಿ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವಿಗೆ ದಾಖಲೆಯ ಮೊತ್ತದ ಚೇಸಿಂಗ್ ಮಾಡುವ ಒತ್ತಡಕ್ಕೆ ಸಿಲುಕಿದ ಆರ್ಸಿಬಿ, ರಿಚಾ ಘೋಷ್ (69 ರನ್, 33 ಎಸೆತ, 6 ಬೌಂಡರಿ, 5 ಸಿಕ್ಸರ್) ಮತ್ತು ಕೊನೆಯಲ್ಲಿ ಸ್ನೇಹಾ ರಾಣಾ (26 ರನ್, 6 ಎಸೆತ, 2 ಬೌಂಡರಿ, 3 ಸಿಕ್ಸರ್) ಪ್ರದರ್ಶಿಸಿದ ಸ್ಫೋಟಕ ಬ್ಯಾಟಿಂಗ್ ನಡುವೆಯೂ 19.3 ಓವರ್ಗಳಲ್ಲಿ 213 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು.
ವೋಲ್ ಆರ್ಭಟ: ಮೊದಲ ವಿಕೆಟ್ಗೆ ಗ್ರೇಸ್ ಹ್ಯಾರಿಸ್ (39) ಜತೆ 43 ಎಸೆತಗಳಲ್ಲಿ 77 ರನ್ ಕಸಿದು ಯುಪಿಗೆ ಭದ್ರ ಬುನಾದಿ ಹಾಕಿಕೊಟ್ಟ 21 ವರ್ಷದ ವೋಲ್, ನಂತರ ಕಿರಣ್ ನವಗಿರೆ (46) ಜತೆ 2ನೇ ವಿಕೆಟ್ಗೆ 31 ಎಸೆತಗಳಲ್ಲೇ 71 ರನ್ ದೋಚಿದರು. ಇನಿಂಗ್ಸ್ನ ಕೊನೇ ಎಸೆತದಲ್ಲಿ ಶತಕಕ್ಕೆ 2 ರನ್ ಗಳಿಸಬೇಕಾಗಿದ್ದ ವೋಲ್ 1 ರನ್ ಗಳಿಸಲಷ್ಟೇ ಶಕ್ತರಾದರು. ಇದರಿಂದ ಡಬ್ಲ್ಯುಪಿಎಲ್ ಇತಿಹಾಸದ ಮೊದಲ ಶತಕ ಸಾಧಕಿ ಎನಿಸುವ ಅವಕಾಶದಿಂದ ವಂಚಿತರಾದರು.
ಯುಪಿ ವಾರಿಯರ್ಸ್: 5 ವಿಕೆಟ್ಗೆ 225 (ಗ್ರೇಸ್ 39, ವೋಲ್ 99*, ಕಿರಣ್ 46, ಹೆನ್ರಿ 19, ಎಕ್ಲೆಸ್ಟೋನ್ 13, ವೇರ್ಹ್ಯಾಂ 43ಕ್ಕೆ 2, ಚಾರ್ಲಿ ಡೀನ್ 47ಕ್ಕೆ 1). ಆರ್ಸಿಬಿ: 19.3 ಓವರ್ಗಳಲ್ಲಿ 213 (ಸ್ಮೃತಿ 4, ಮೇನಾ 27, ಪೆರ್ರಿ 28, ರಾವಿ 14, ರಿಚಾ 69, ವೇರ್ಹ್ಯಾಂ 17, ಸ್ನೇಹಾ 26, ದೀಪ್ತಿ 50ಕ್ಕೆ 3, ಎಕ್ಲೆಸ್ಟೋನ್ 25ಕ್ಕೆ 3, ಹೆನ್ರಿ 39ಕ್ಕೆ 2).