

ನವದೆಹಲಿ: ಇಡೀ ವಿಶ್ವದಲ್ಲಿಯೇ ಭಾರತೀಯ ರೈಲ್ವೆಗೆ ಅದರದ್ದೇ ಆದ ವಿಶೇಷತೆ ಇದೆ. 166 ವರ್ಷಗಳ ಇತಿಹಾಸ ಇರುವ ಭಾರತೀಯ ರೈಲ್ವೆ ಇದಾಗಲೇ ಹಲವಾರು ಸಮ್ಮಾನ, ಬಿರುಗಳಿಗೂ ಪಾತ್ರವಾಗಿದೆ.
ಇದೀಗ ಹೊಸ ದಾಖಲೆಯನ್ನು ಬರೆಯುವ ಮೂಲಕ ಮತ್ತೊಂದು ಮಹತ್ವದ ಘಟ್ಟ ತಲುಪಿದೆ. ಅದೇನೆಂದರೆ 2019-20ನೇ ವರ್ಷವನ್ನು ಅತ್ಯಂತ ಸುರಕ್ಷಿತ ಸಂಚಾರ ವರ್ಷವೆಂಬ ಹೆಗ್ಗಳಿಕೆಯನ್ನು ಇಲಾಖೆ ಪಡೆದಿದೆ. ಕಾರಣ ಏನೆಂದರೆ, 2019ರ ಏಪ್ರಿಲ್ ತಿಂಗಳಿನಿಂದ 2020 ಮಾರ್ಚ್ವರೆಗೆ ಒಂದೇ ಒಂದು ಅಪಘಾತ ಸಂಭವಿಸಿಲ್ಲ. ಅಷ್ಟೇ ಅಲ್ಲದೇ, ಒಂದೇ ಒಂದು ಪ್ರಯಾಣಿಕನೂ ಮೃತಪಟ್ಟಿಲ್ಲ. ಇದು 166 ವರ್ಷಗಳ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.
ಕಳೆದ 15 ತಿಂಗಳಿಂದ ಅತ್ಯಂತ ಗರಿಷ್ಠ ಮಟ್ಟದ ಸುರಕ್ಷತೆಯನ್ನು ರೈಲ್ವೆ ಇಲಾಖೆ ಕಾಪಾಡಿಕೊಂಡಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ರೋಡ್ ರಿವರ್ ಸೇತುವೆಗಳ ನಿರ್ಮಾಣ, ಮಾನವರಿಂದ ನಿರ್ವಹಿತ ರೈಲ್ವೆ ಕ್ರಾಸಿಂಗ್‌ಗಳ ನಿರ್ಮೂಲನೆ, ರೋಡ್ ಅಂಡರ್ ಸೇತುವೆಗಳನ್ನು ಕಟ್ಟಲು ಒತ್ತು ನೀಡಿದ್ದು, ರೈಲ್ವೆ ಟ್ರ್ಯಾಕ್‌ಗಳ ಪರಿಶೀಲನೆ ಮತ್ತು ಸಿಗ್ನಲ್ ವ್ಯವಸ್ಥೆ ಉನ್ನತೀಕರಣದಿಂದಾಗಿ ಇದು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2018 - 19ರಲ್ಲಿ ರೈಲು ಅಪಘಾತದಲ್ಲಿ 16 ಮಂದಿ ಮೃತಪಟ್ಟಿದ್ದು, 2017 - 2018ರಲ್ಲಿ 28 ಮಂದಿ, 2016-2017ರಲ್ಲಿ 195 ಜನ ರೈಲು ಅಪಘಾತಗಳಿಂದ ಮೃತಪಟ್ಟಿದ್ದಾರೆ.. 1990 ರಿಂದ 1995ರವರೆಗೆ ಪ್ರತಿ ವರ್ಷ 500 ಅಪಘಾತಗಳು ನಡೆದಿದ್ದು, ಈ ಸಮಯದಲ್ಲಿ 2,400 ಸಾವುಗಳು ಮತ್ತು 4,300 ಜನ ಗಾಯಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಇನ್ನು, 2013-2018ರ ಅವಧಿಯಲ್ಲಿ ಪ್ರತಿ ವರ್ಷ 110 ಅಪಘಾತಗಳು ಸಂಭವಿಸಿವೆ. ಈ ಅವಧಿಯಲ್ಲಿ 990 ಜನ ಸಾವನ್ನಪ್ಪಿದ್ದು, 1,500 ಜನ ಗಾಯಗೊಂಡಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ. (ಏಜೆನ್ಸೀಸ್)