ವಿಶ್ವಾದ್ಯಂತ ಆಂತರಿಕ ಸಂಘರ್ಷ, ದುರಂತಗಳ ಪರಿಣಾಮ ಐದು ಕೋಟಿಗೂ ಅಧಿಕ ಜನರು ನಿರಾಶ್ರಿತ

Suddi Samagra
Published on

ವಿವಿಧ ದೇಶಗಳಲ್ಲಿನ ಆಂತರಿಕ ಸಂಘರ್ಷ, ಹಿಂಸಾಚಾರ ಹಾಗೂ ಪ್ರಕೃತಿ ವಿಕೋಪಗಳಿಂದ 2019ರ ಅಂತ್ಯದ ಹೊತ್ತಿಗೆ 50.8 ಮಿಲಿಯನ್ ಜನರು ನೆಲೆ ಕಳೆದುಕೊಂಡಿದ್ದಾರೆ. 45.7 ಮಿಲಿಯನ್ ಜನರು ಸಂಘರ್ಷ, ಹಿಂಸಾಚಾರಗಳಿಂದ ಹಾಗೂ 5.1 ಮಿಲಿಯನ್ ಜನರು ಪ್ರಕೃತಿ ದುರಂತಗಳಿಂದ ಸಂತ್ರಸ್ತರಾಗಿದ್ದಾರೆ ಎಂದು ಈ ಕುರಿತ ಜಾಗತಿಕ ವರದಿಯೊಂದು ಬಹಿರಂಗಪಡಿಸಿದೆ. ನಾರ್ವೆಯ ನಿರಾಶ್ರಿತರ ಮಂಡಳಿಯ ಆಂತರಿಕ ಸ್ಥಳಾಂತರ ನಿಗಾ ಕೇಂದ್ರ (ಐಡಿಎಂಸಿ) ಈ ವರದಿ ಸಿದ್ಧಪಡಿಸಿದೆ.

ಭಾರತಕ್ಕೆ ಏಟು

ಫನಿ ಮತ್ತು ಬುಲ್​ಬುಲ್ ಚಂಡಮಾರುತ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ನೆಲೆ ಕಳೆದುಕೊಳ್ಳುವಂತೆ ಮಾಡಿತು. ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಜನರನ್ನು ತೆರವು ಮಾಡುವುದು ಅನಿವಾರ್ಯ. ಅದರಿಂದ ಜನರ ಜೀವ ಉಳಿಯುತ್ತದೆ. ಆ ಪೈಕಿ ಅನೇಕ ಜನರ ಮನೆಗಳು ಹಾನಿಗೀಡಾಗಿ ಅಥವಾ ನಾಶವಾಗಿ ಅವರು ಸ್ಥಳಾಂತರಗೊಳ್ಳಬೇಕಾಗುತ್ತದೆ. 2019ರಲ್ಲಿ 50 ದೇಶಗಳಲ್ಲಿ ಸಂಘರ್ಷಗಳಿಂದಾಗಿ ಜನರು ಸ್ಥಳಾಂತರಗೊಂಡ ಘಟನೆಗಳು ಸೇರ್ಪಡೆಯಾಗಿವೆ ಎಂದು ವರದಿ ಹೇಳಿದೆ.

ಸಿರಿಯಾ, ಯೆಮನ್ ಮತ್ತು ಲಿಬಿಯಾಗಳಲ್ಲಿ ದೀರ್ಘ ಕಾಲದಿಂದ ನಡೆಯುತ್ತಿರುವ ಕಾದಾಟಗಳು ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದಲ್ಲಿ ಸ್ಥಳಾಂತರಗೊಂಡವರ ಸಂಖ್ಯೆ ಹೆಚ್ಚಾಗಲು ಕಾರಣ. ಸಿರಿಯಾ, ಕಾಂಗೋ ಮತ್ತು ಇಥಿಯೋಪಿಯಾದಂಥ ಕೆಳ ಹಾಗೂ ಮಧ್ಯಮ ಆದಾಯದ ದೇಶಗಳಲ್ಲೇ ಸಂಘರ್ಷಗಳಿಂದ ಹೆಚ್ಚಿನ ಸ್ಥಳಾಂತರ ಆಗಿದೆ ಎಂಬ ವಿಶೇಷ ಅಂಶವನ್ನು ವರದಿ ಗಮನಕ್ಕೆ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net