ಈಕೆ ವಿಶ್ವದ ಅತ್ಯಂತ ಸೆಕ್ಸಿ ಅಥ್ಲೀಟ್, ಈಗ ಫಿಟ್ನೆಸ್ ಕೋಚ್!

world sexy athlete web
Published on

ಬರ್ಲಿನ್: ಜರ್ಮನಿಯ ಕ್ರೀಡಾಪಟು ಅಲಿಕಾ ಸ್ಕಮಿಟ್ ವಿಶ್ವದ ಅತ್ಯಂತ ಸೆಕ್ಸಿ ಅಥ್ಲೀಟ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮಧ್ಯಮ ಅಂತರ ಓಟಗಾರ್ತಿಯಾಗಿರುವ ಅಲಿಕಾ, ಇದೀಗ ಜರ್ಮನಿಯ ಪ್ರತಿಷ್ಠಿತ ಫುಟ್‌ಬಾಲ್ ಕ್ಲಬ್ ಬೊರುಷಿಯಾ ಡಾರ್ಟ್‌ಮಂಡ್‌ಗೆ ಫಿಟ್ನೆಸ್ ಕೋಚ್ ಆಗಿಯೂ ಸೇರ್ಪಡೆಗೊಂಡು ಸದ್ದು ಮಾಡಿದ್ದಾರೆ.

21 ವರ್ಷದ ಅಲಿಕಾ ಸ್ಕಮಿಟ್ ಈ ವರ್ಷ ಆಸ್ಟ್ರೇಲಿಯಾದ ಮ್ಯಾಗಝಿನ್ ‘ಬಸ್ಟೆಡ್ ಕವರೇಜ್’ನಿಂದ ‘ವಿಶ್ವದ ಅತ್ಯಂತ ಸೆಕ್ಸಿ ಅಥ್ಲೀಟ್’ ಎಂಬ ಹೆಗ್ಗಳಿಕೆ ಸಂಪಾದಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸೆಕ್ಸ್ ಲುಕ್ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕವೂ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅಥ್ಲೆಟಿಕ್ಸ್ ಮಾತ್ರವಲ್ಲದೆ ಮಾಡೆಲಿಂಗ್‌ನಲ್ಲೂ ಅಲಿಕಾ ಸಾಕಷ್ಟು ಹೆಸರು ಮಾಡಿದ್ದಾರೆ.

ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಹಂಬಲದಲ್ಲಿರುವ ಅಲಿಕಾ ಸ್ಕಮಿಟ್, 2017ರಲ್ಲಿ ಯುರೋಪಿಯನ್ ಅಥ್ಲೆಟಿಕ್ಸ್ 20 ವಯೋಮಿತಿ ಚಾಂಪಿಯನ್‌ಷಿಪ್‌ನ 4/400 ಮೀಟರ್ ರಿಲೇಯಲ್ಲಿ ರಜತ ಪದಕ ಜಯಿಸಿದ ಜರ್ಮನಿ ತಂಡದ ಭಾಗವಾಗಿದ್ದರು.

ಬೊರುಷಿಯಾ ಡಾರ್ಟ್‌ಮಂಡ್ ತಂಡದ ಫಿಟ್ನೆಸ್ ಕೋಚ್ ಆಗಿ ಆಟಗಾರರ ದೈಹಿಕ ಕ್ಷಮತೆಯ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅಲಿಕಾ ಪ್ರಯತ್ನಿಸುತ್ತಿದ್ದು, ಇಷ್ಟು ಸಣ್ಣ ವಯಸ್ಸಿನಲ್ಲೇ ಅವರಿಗೆ ಇಂಥ ದೊಡ್ಡ ಜವಾಬ್ದಾರಿ ಒಲಿದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ವ್ಯಕ್ತವಾಗಿದೆ. ವಿಶ್ವದ ಅತ್ಯಂತ ಸೆಕ್ಸಿ ಅಥ್ಲೀಟ್ ಎಂಬ ಹೆಸರು ಪಡೆದುಕೊಂಡ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಅವರ ಹಿಂಬಾಲಕರ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net