More

  ಹಣ ಕೊಟ್ಟು ಕುಡಿಯುವ ನೀರಿನ ಬಳಕೆ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಬೇಸರ

  ಮಂಡ್ಯ: ಸಕಲ ಜೀವರಾಶಿಗೆ ನೀರು ಮತ್ತು ಆಹಾರ, ಗಾಳಿ ಅತ್ಯವಶ್ಯಕ. ವಾಸಮಾಡಲು ಮನೆಯಿಲ್ಲದಿದ್ದರೂ ಕುಡಿಯಲು ನೀರು ಅತ್ಯಗತ್ಯ. ಆದರೆ ಪ್ರಸ್ತುತ ಹಣ ಕೊಟ್ಟು ಜೀವ ಜಲ ಉಪಯೋಗಿಸುವ ಹಂತಕ್ಕೆ ಬಂದಿದ್ದೇವೆ. ಮನೆ ಖರ್ಚುಗಳಲ್ಲಿ ನೀರಿನ ಲೆಕ್ಕವು ಶೇ.3ರಷ್ಟು ಸೇರಿಕೊಳ್ಳುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
  ತಾಲೂಕಿನ ಕಾರಸವಾಡಿ ಗ್ರಾಮದ ಚಿಕ್ಕಕೆರೆ ಏರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಪರಿಷತ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾವೇರಿ ನೀರಾವರಿ ನಿಗಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಹಿಳಾ ಸರ್ಕಾರಿ ಕಾಲೇಜು ಮತ್ತು ಮಂಡ್ಯ ವಿಶ್ವವಿದ್ಯಾನಿಲಯ, ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ, ಸಂತೆಕಸಲಗೆರೆ ಗ್ರಾಪಂ ಹಾಗೂ ಕಾರಸವಾಡಿ ಗ್ರಾಮಸ್ಥರ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಲಮೂಲಗಳ ಸಂರಕ್ಷಣೆ-ನಮ್ಮೆಲ್ಲರ ಹೊಣೆ ಕಾರ್ಯ ಯೋಜನೆಗೆ ಚಾಲನೆ ಹಾಗೂ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದರು.
  ಪ್ರಸ್ತುತ ದಿನಗಳಲ್ಲಿ ಶುದ್ಧ ಕುಡಿಯುವ ನೀರು ಕೂಡ ಉದ್ಯಮವಾಗುತ್ತಿದೆ. ನೀರನ್ನು ಶುದ್ಧೀಕರಿಸಿ ಉದ್ಯಮವಾಗಿ ಬೆಳೆಯುತ್ತಿದೆ. ಪ್ರಕೃತಿಯಲ್ಲಿ ಸಿಗುವ ನೀರು ಬಾಟಲಿ ವಾಟರ್ ಆಗಿದೆ. ಜೀವ ಜಲ ಚಿನ್ನದ ತರವಾಗುತ್ತಿದೆ. ನೀರಿಗೆ ಹೆಚ್ಚು ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಜಲಸಾಕ್ಷರತೆ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕಿದ್ದು, ಎಲ್ಲರ ಸಹಕಾರ ಬೇಕಾಗಿದೆ ಎಂದು ಸಲಹೆ ನೀಡಿದರು.
  ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ ಮಾತನಾಡಿ, ಜಲಮೂಲ ಎಲ್ಲ ಜೀವರಾಶಿಗಳಿಗೆ ಅತ್ಯವಶ್ಯಕ. ಆದ್ದರಿಂದ ಜಲ ಜಾಗೃತಿಯಾಗಬೇಕಿದೆ. ದೇಶ ನನಗೇನು ಮಾಡಿದ ಎನ್ನುವುದಕಿಂತ ದೇಶಕ್ಕೆ ಏನು ಮಾಡಿದೆ ಎನ್ನುವ ಮನೋಭಾವ ಇರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ನೀರಿನ ಹಾಹಾಕಾರ ಹೆಚ್ಚಾಗಲಿದೆ. ಅಲ್ಲಿನ ಜನತೆ ನೀರಿಗಾಗಿ ಹೊಸ ವಿಧಾನಗಳನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ. ನೀರು ಉಳಿಸುವ ತಂತ್ರಜ್ಞಾನವನ್ನು ಶೋಧಿಸಿದ್ದಾರೆ. ನಮ್ಮ ನಿಗಮದಿಂದ ಕೆರೆಗಳ ಅಭಿವೃದ್ದಿಗೆ ಸಹಕಾರ ಮತ್ತು ಆದ್ಯತೆ ನೀಡಲಾಗುವುದು ಎಂದು ನುಡಿದರು.
  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಚೇತನಾ ಮಾತನಾಡಿ, ವಿಶ್ವದಲ್ಲಿ ಯುದ್ಧ ನಡೆದರೆ ಅದು ನೀರಿಗಾಗಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂತಹ ಸನ್ನಿವೇಶದಲ್ಲಿ ಮುಂದಿನ ಪೀಳಿಗೆಗಾಗಿ ನೆಲ ಜಲವನ್ನು ಸಂರಕ್ಷಿಸಬೇಕಿದೆ. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶದಲ್ಲಿ ಜಿಲ್ಲೆಯಲ್ಲಿ ಹಲವು ಕೆರೆಗಳು ಅಭಿವೃದ್ದಿ ಕಾಣುತ್ತಿವೆ ಎಂದರು.
  ಸಹಾಯಕ ಪರಿಸರ ಅಧಿಕಾರಿ ಭವ್ಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ.ಲೋಕೇಶ್, ಡಾ.ಎಂ.ಕೆಂಪಮ್ಮ, ಡಾ.ನಾಗಪ್ಪ, ಕೆ.ಎಂ.ಬಸವರಾಜು, ಜಯಪ್ಪ, ಚಾಮರಾಜು, ಕಾರಸವಾಡಿ ಮಹದೇವು, ರಂಗಸ್ವಾಮಿ, ದೇವರಾಜ ಕೊಪ್ಪ, ಲಂಕೇಶ್ ಮಂಗಲ ಇತರರಿದ್ದರು.
  ಇದೇ ಸಂದರ್ಭದಲ್ಲಿ ಚಿಕ್ಕಕೆರೆಯಲ್ಲಿ ಶ್ರಮದಾನ ಮಾಡಲಾಯಿತು. ಕೆರೆ ಏರಿಯನ್ನು ಸ್ವಚ್ಛ ಮಾಡಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಯಿತು. ಜಲ ಜಾಗೃತಿ ಕುರಿತು ಗಾಯಕ ಹನಿಯಂಬಾಡಿ ಎನ್.ಶೇಖರ್ ಮತ್ತು ತಂಡದಿಂದ ಗೀತ ಗಾಯನ ನಡೆಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts