

Air Chief Marshal AP Singh: ಸುಮಾರು ನಾಲ್ಕು ವರ್ಷಗಳ ರಷ್ಯಾ-ಉಕ್ರೇನ್ ಯುದ್ಧವನ್ನು ತ್ವರಿತವಾಗಿ ಅಂತ್ಯಗೊಳಿಸುವುದು ಹೇಗೆ ಎನ್ನುವುವರ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಜಾಗತಿಕವಾಗಿ ಚಿಂತನೆ ನಡೆಸುತ್ತಿರುವ ನಡುವೆ, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ಜಗತ್ತು ಭಾರತವನ್ನು ನೋಡಿ ಕಲಿಯಬೇಕಿದೆ ಎಂಬ ಸಲಹೆಯನ್ನು ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್, ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ಮೆಲುಕು ಹಾಕಿ, ಇಂದು ನಡೆಯುತ್ತಿರುವ ಪ್ರಮುಖ ಯುದ್ಧಗಳು, ಅದು ರಷ್ಯಾ, ಉಕ್ರೇನ್ ಅಥವಾ ಇಸ್ರೇಲ್ ಯುದ್ಧವಾಗಿರಬಹುದು. ಅವು ವರ್ಷಗಳಿಂದ ನಡೆಯುತ್ತಿವೆ, ಯಾರೂ ಸಂಘರ್ಷ ಮುಕ್ತಾಯದ ಬಗ್ಗೆ ಯೋಚಿಸುತ್ತಿಲ್ಲ, ಯುದ್ಧದ ಆರಂಭ ಮತ್ತು ಅಂತ್ಯದ ವಿಷಯದಲ್ಲಿ ಜಗತ್ತು ಭಾರತದಿಂದ ಕಲಿಯುವುದು ಬಹಳಷ್ಟಿದೆ ಎಂದು ಹೇಳಿದರು.
ಫೆಬ್ರವರಿ 2022 ರಲ್ಲಿ ಪ್ರಾರಂಭವಾದಾಗಿನಿಂದ ರಷ್ಯಾ-ಉಕ್ರೇನ್ ಯುದ್ಧವು ಎರಡೂ ಕಡೆಗಳಲ್ಲಿ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಗಣನೀಯ ಮೂಲಸೌಕರ್ಯ ಹಾನಿಯನ್ನುಂಟುಮಾಡಿದೆ. ಇಸ್ರೇಲ್ ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ ಭಯೋತ್ಪಾದಕ ಗುಂಪು ಹಮಾಸ್ ಜೊತೆಗೆ ಯುದ್ಧದಲ್ಲಿ ತೊಡಗಿದೆ , ಜೊತೆಗೆ ಅಕ್ಟೋಬರ್ 2023 ರಿಂದ ಇರಾನ್ ಸೇರಿದಂತೆ ಹಮಾಸ್‌ಗೆ ಬೆಂಬಲ ನೀಡುವುದಾಗಿ ಹಲವಾರು ಇಸ್ಲಾಮಿಕ್ ರಾಷ್ಟ್ರಗಳು ಪ್ರತಿಜ್ಞೆ ಮಾಡಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7 ರಂದು ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಆಪರೇಷನ್ ಸಿಂಧೂರ ದಾಳಿಯನ್ನು ಪ್ರಾರಂಭಿಸಿದ ಭಾರತ ಕೇವಲ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬಂದಿತು. ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದಲ್ಲಿ ಹಲವಾರು ವಾಯುನೆಲೆಗಳು ಮತ್ತು ಒಂಬತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳು ನಾಶವಾಗಿದ್ದು, ಭಾರತಕ್ಕೆ ಯಾವುದೇ ಗಮನಾರ್ಹ ಹಾನಿಯಾಗಲಿಲ್ಲ ಎಂದು ವರದಿಯಾಗಿದೆ.
ಪಾಕಿಸ್ತಾನದ ವಿರುದ್ಧದ ದಾಳಿಯನ್ನು ನಿಲ್ಲಿಸಲು ಭಾರತ ಏಕೆ ಒಪ್ಪಿಕೊಂಡಿತು ಎಂಬ ಬಗ್ಗೆ ವಿರೋಧ ಪಕ್ಷಗಳು ಸೇರಿದಂತೆ ಅನೇಕ ವಲಯಗಳು ಎತ್ತಿರುವ ಅನುಮಾನಗಳನ್ನು ವಾಯುಪಡೆಯ ಮುಖ್ಯಸ್ಥರು ಪರಿಹರಿಸಿದರು. ನಾವು ಸ್ವಲ್ಪ ಹೆಚ್ಚು ದಾಳಿ ಮಾಡಬೇಕಿತ್ತು ಎಂದು ಜನರು ಹೇಳುವುದನ್ನು ಕೇಳಿದ್ದೇವೆ. ಯುದ್ಧವನ್ನು ಬಹಳ ಬೇಗನೆ ನಿಲ್ಲಿಸಿದ್ದರ ಬಗ್ಗೆ ಟೀಕೆಗಳಿವೆ, ಆದರೆ, ಪಾಕಿಸ್ತಾನ ಹಿಂದೆ ಸರಿಯಿತು, ಭಯೋತ್ಪಾದನೆ ವಿರುದ್ಧ ದಾಳಿ ಮಾಡುವುದು ನಮ್ಮ ಉದ್ದೇಶ, ಅದನ್ನು ನಾವು ಮಾಡಿದ್ದೇವೆ. ನಮ್ಮ ಉದ್ದೇಶಗಳು ಈಡೇರಿದರೂ, ನಾವು ಸಂಘರ್ಷವನ್ನು ಕೊನೆಗೊಳಿಸಬಾರದೆ ಎಂದು ಪ್ರಶ್ನಿಸಿದರು. ಒಂದು ವೇಳೆ ಭಾರತ ಸಂಘರ್ಷವನ್ನು ಕೊನೆಗೊಳಿಸದಿದ್ದರೆ, ಅದು ಮುಂದಿನ ಅಂತಹ ಕಾರ್ಯಾಚರಣೆಗೆ ಸಿದ್ಧತೆ ಕೈಗೊಳ್ಳುವಲ್ಲಿ, ದೇಶದ ಆರ್ಥಿಕತೆ ಮತ್ತು ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಎಪಿ ಸಿಂಗ್ ಹೇಳಿದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಜನರನ್ನು ಕೊಂದ ಕೆಲವು ದಿನಗಳ ನಂತರ, ಭಾರತೀಯ ಸಶಸ್ತ್ರ ಪಡೆಗಳು ಮೇ 7 ರಂದು ಆಪರೇಷನ್ ಸಿಂಧೂರ ನಿಖರ ದಾಳಿ ನಡೆಸಿ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಮಾಡಿದವು. ಈ ದಾಳಿಯಲ್ಲಿ ಒಂಬತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳು ನಾಶವಾದರೆ, 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.(ಏಜೆನ್ಸೀಸ್)