

ಮಂಡ್ಯ: ಪ್ರಸ್ತುತ ದಿನಗಳಲ್ಲಿ ತಂಬಾಕು ಮುಕ್ತ ಮನೆಯನ್ನಾಗಿಸುವುದು ಅತ್ಯಾವಶ್ಯಕ ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ತಾಲೂಕಿನ ಸಾತನೂರು ಗ್ರಾಮದ ಎಸ್.ಎಲ್.ಎನ್ ವಿದ್ಯಾಸಂಸ್ಥೆ ಆವರಣದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಸಾತನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂಬಾಕು ಬಳಕೆಯಿಂದ ಪ್ರತಿವರ್ಷ ಕೋಟ್ಯಂತರ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಪ್ರಾಣ ಮತ್ತು ಜೀವನ ಅಮೂಲ್ಯವೆಂದು ಇನ್ಯಾವಾಗ ಅರಿವಾಗುತ್ತದೆ. ಧೂಮಪಾನ ಮುಕ್ತ ವಾತಾವರಣ ವ್ಯಸನಿಗಳಿಂದ ಸಾಧ್ಯವಿದೆ. ಪ್ರತಿ ವರ್ಷ ಮೇ.31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ತಂಬಾಕಿನ ದುಷ್ಪರಿಣಾಮ ಮತ್ತು ಸೇವನೆಯನ್ನು ಕಡಿಮೆ ಮಾಡುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಇಲಾಖೆಗಳು ಮತ್ತು ಸಂಘ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ ಎಂದು ತಿಳಿಸಿದರು.
ವಿದ್ಯಾರ್ಥಿ ದಿಸೆಯಲ್ಲೇ ತಂಬಾಕಿನ ಪದಾರ್ಥಗಳಾದ ಬೀಡಿ, ಸಿಗರೇಟ್, ಗುಟ್ಖಾ, ಗಾಂಜಾ, ಅಫೀಮು, ಮತ್ತು ಬರುವ ಪದಾರ್ಥಗಳ ಸೇವೆನೆಯಿಂದ ದೂರವಿರುವಂತೆ ಜಾಗೃತಿ ಮೂಡಿಸುವುದು ಉತ್ತಮ. ಧೂಮಪಾನ ವ್ಯಸನಿಗಳು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ ಜತೆಗೆ ಇತರರ ಆರೋಗ್ಯವನ್ನು ಹಾಳು ಮಾಡುತ್ತಾರೆ ಎಂದು ಎಚ್ಚರಿಸಿದರು.
ಅಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಜಿಲ್ಲಾ ಗರ್ವನರ್ ಕೆ.ಟಿ.ಹನುಮಂತು ಮಾತನಾಡಿ, ವಿಶ್ವ ತಂಬಾಕು ರಹಿತ ದಿನವನ್ನು 1987ರಲ್ಲಿ ಮೊದಲ ಬಾರಿಗೆ ಆಚರಣೆಗೆ ತರಲಾಯಿತು. ತಂಬಾಕು ಉತ್ಪನ್ನಗಳ ವ್ಯಾಪಕ ವಾಣಿಜ್ಯ ಮಾರುಕಟ್ಟೆ ಮತ್ತು ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಸಾರ್ವಜನಿಕರ ಗಮನವನ್ನು ಸೆಳೆಯುವ ಸಲುವಾಗಿ ಈ ದಿನವನ್ನು ಸ್ಥಾಪಿಸಲಾಯಿತು. ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ಸಾತನೂರು ಪಿಎಚ್ಸಿ ಆಡಳಿತ ವೈದ್ಯಾಧಿಕಾರಿ ಡಾ.ಶಿಲ್ಪಾ, ಎಸ್ಎಲ್ಎನ್ ವಿದ್ಯಾಸಂಸ್ಥೆ ಸಂಸ್ಥಾಪಕ ಪುಟ್ಟಸ್ವಾಮಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ತಿಮ್ಮರಾಜು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ, ರೆಡ್ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ರಾಮು, ಜಗದೀಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಜನರ ಗಮನ ಸೆಳೆದರು.