More

    ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಕಿವಿಮಾತು

    ಮಂಡ್ಯ: ವಿದ್ಯೆ ಮತ್ತು ಜ್ಞಾನ ಕೇವಲ ಒಬ್ಬರಿಗೆ ಮಾತ್ರ ಸೀಮಿತವಾದ ಆಸ್ತಿಯಲ್ಲ. ಆದ್ದರಿಂದ ವಿದ್ಯೆ ಮತ್ತು ಜ್ಞಾನದ ಮೂಲಕ ಪ್ರತಿಯೊಬ್ಬರೂ ತಮ್ಮ ಬದುಕು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸಲಹೆ ನೀಡಿದರು.
    ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎ.ಡಿ.ಆರ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯಿಂದ 19ಕ್ಕೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದ್ದರಿಂದ ಕಾರ್ಮಿಕರು ಮೊದಲು ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
    ಮನೆಯಲ್ಲಿ ಬಡತನವಿದೆ ಎಂದು ತಾವು ಮಾಡುತ್ತಿರುವ ವೃತ್ತಿಯಲ್ಲೇ ಮಕ್ಕಳನ್ನು ತೊಡಗಿಸಿಕೊಳ್ಳುವ ಪ್ರೌವೃತ್ತಿ ಬಹಳಷ್ಟು ಕಾರ್ಮಿಕರಲ್ಲಿ ಇರುತ್ತದೆ. ಈ ಪ್ರೌವೃತ್ತಿಯಿಂದ ದೂರವಿರಿ. ಕಾರ್ಮಿಕ ಇಲಾಖೆಯಲ್ಲಿ ಅನುದಾನ ಹಾಗೂ ಸೌಲಭ್ಯಗಳ ಕೊರತೆ ಇಲ್ಲ. ಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ. ಅವರನ್ನು ಉನ್ನತ ಅಧಿಕಾರಿಗಳನ್ನಾಗಿ ಮಾಡಲು ಶ್ರಮಿಸಬೇಕು. ಇಂದಿನ ದಿನಗಳಲ್ಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಬಡತನದಲ್ಲಿರುವ ಮಕ್ಕಳು ಸಹ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿರುವ ಉದಾಹರಣೆಗಳು ತಮ್ಮ ಮುಂದೆ ಇದೆ. ಅವರುಗಳು ನಿಮಗೆ ಮಾದರಿ ಎಂದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಗೊಳಿಸಿ ಘನತೆಯುಕ್ತ ಬದುಕು ನಡೆಸಬೇಕು. ದುಡಿಯುವ ವ್ಯಕ್ತಿಗಳನ್ನು ಗೌರವಿಸಬೇಕು ಎಂದು ಬಾಬು ಜಗಜೀವನ್ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಂಘಟನೆಗಳನ್ನು ರಚಿಸಿದರು. ದುಡಿಯುವ ವರ್ಗವೇ ದೇಶಕ್ಕೆ ಸಂಪನ್ಮೂಲ ಎಂದು ಕಾರ್ಮಿಕ ವರ್ಗಕ್ಕೆ ವಿಶೇಷ ಪ್ರಾತಿನಿದ್ಯ ನೀಡಲಾಯಿತು ಎಂದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ ಮಾತನಾಡಿ, ಬಡತನದಲ್ಲಿ ವಿದ್ಯಾಭ್ಯಾಸ ನಡೆಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಇತರರಿಗೆ ಸದಾ ಮಾದರಿಯಾಗಿರುತ್ತಾರೆ. ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ನಡೆಸಿ ಉನ್ನತ ಸ್ಥಾನವನ್ನು ಅಲಂಕರಿಸಿ ಎಂದು ಶುಭ ಹಾರೈಸಿದರು.
    ವಕೀಲರ ಸಂಘದ ಅಧ್ಯಕ್ಷ ಎಂ.ಟಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts