ಹೆತ್ತವರೇ ಕಣ್ಣಿಗೆ ಕಾಣುವ ದೇವರು...

Fathers Day
Published on

ಶಿಕ್ಷಕಿ ಉಷಾ ಅಭಿಮತ

ವಿಶ್ವ ಅಪ್ಪಂದಿರ ದಿನ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಲ್ಲ ತಂದೆ&ತಾಯಿಗಳೂ ಮಕ್ಕಳ ಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಆದರೆ, ಅವರಿಗೆ ವಯಸ್ಸಾಯಿತೆಂದು ಮಕ್ಕಳೇ ವೃದ್ಧಾಶ್ರಮಕ್ಕೆ ತಳ್ಳುತ್ತಿರುವುದು, ಅದೇ ಅವರ ಕೊರಗಿಗೆ ಕಾರಣವಾಗುತ್ತಿರುವುದು ಆತಂಕಕಾರಿ. ಎಷ್ಟೇ ಮುಪ್ಪಾದರೂ ಅವರಿಂದಲೇ ನಾವು ಎಂಬ ಸತ್ಯ ಅರಿಯಬೇಕು. ಕಣ್ಣಿಗೆ ಕಾಣುವ ದೇವರುಗಳಾದ ಪಾಲಕರಿಗೆ ಪ್ರೀತಿಯ ಧಾರೆ ಎರೆದು, ಸಂತೋಷದಿಂದ ಸಲಹಬೇಕು ಎಂದು ಮನೋದೃತ ಬುದ್ಧಿಮಾಂದ್ಯ ಶಾಲೆಯ ಶಿಕ್ಷಕಿ ಉಷಾ ಸಲಹೆ ನೀಡಿದರು.

ಉಡುಪಿಯ ಕಡಿಯಾಳಿಯಲ್ಲಿರುವ ಮನೋದೃತ ಬುದ್ಧಿಮಾಂದ್ಯ ಶಾಲೆಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಅಪ್ಪಂದಿರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರದೇಶಿಗಳಾದ ಹೆತ್ತವರು

ವೇದಿಕೆಯ ಅಧ್ಯಕ್ಷ ಶ್ರೀನಿವಾಸ ರಾವ್​ ಕೆ. ಮಾತನಾಡಿ, ಅಪ್ಪ ನಕ್ಕಿದ್ದಷ್ಟೇ ಕಾಣುತ್ತೇವೆ. ಬಿಕ್ಕಿದ್ದು ಎಂದೂ ಕಾಣದು. ದುಡಿಯುವುದನ್ನಷ್ಟೇ ತೋರಿಸಿಕೊಳ್ಳುತ್ತಾನೆ. ಆದರೆ, ದಣಿದದ್ದು ತೋರಿಸಿಕೊಳ್ಳುವುದಿಲ್ಲ. ತಾನು ಕಾಣದ ಜಗತ್ತನ್ನು ಮಕ್ಕಳು ಕಾಣಲಿ ಎಂದು ಬಯಸುವ ಜೀವಿ ಅಪ್ಪ. ಇಂದು ಮಕ್ಕಳೆಲ್ಲ ವಿದೇಶಿ, ತಂದೆ-ತಾಯಿ ಪರದೇಶಿ ಆಗುತ್ತಿದ್ದಾರೆ. ಸಾಕಷ್ಟು ಹಣ ಗಳಿಸುತ್ತಿದ್ದರೂ ಹೆತ್ತವರ ಕಾಳಜಿ ಮರೆಯುತ್ತಿದ್ದಾರೆ. ಇದಕ್ಕೆ ಸಂಸ್ಕಾರಯುತ ಶಿಕ್ಷಣ ಸಿಗದಿರುವುದೇ ಕಾರಣ ಎಂದರು.

ಮಡಿದವರಿಗಾಗಿ ಮೌನಾಚರಣೆ

ಅಹಮ್ಮದಾಬಾದ್​ ವಿಮಾನ ದುರಂತದಲ್ಲಿ ಮತ್ತು ಬೆಂಗಳೂರಿನ ಕಾಲ್ತುಳಿತದಲ್ಲಿ ಮಡಿದವರಿಗಾಗಿ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಲಾಯಿತು. ಮನೋದೃತ ಬುದ್ಧಿಮಾಂದ್ಯ ಶಾಲೆಯ ವಿದ್ಯಾರ್ಥಿಗಳಿಗೆ ವೇದಿಕೆಯ ವತಿಯಿಂದ ಶೈಕ್ಷಣಿಕ ಪರಿಕರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವೇದಿಕೆಯ ಸುರೇಶ, ಅನುರಾಧಾ ಜಿ.ಎಸ್​., ರಾಮಕೃಷ್ಣ, ಶೋಭಾ, ರಾಘವೇಂದ್ರ, ಶ್ರೀನಿವಾಸ ಬಿ., ದೀಪಾ, ಹೇಮಲತಾ, ಸುಮಲತಾ, ಲಕ್ಷ್ಮೀ, ಜಯಲಕ್ಷ್ಮೀ, ಗೀತಾ, ವಿಠ್ಠಲ, ಚಂದ್ರಶೇಖರ, ಪ್ರಭಾ, ಕಾವ್ಯಾ, ಶಿಕ್ಷಕಿ ಪ್ರಭಾ ಕೆ. ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net