

ಸುಳ್ಯ: ಪ್ರಕೃತಿ, ಮಾನವ ಸಂಬಂಧ ಉತ್ತಮವಾಗಿದ್ದರೆ ಮಾತ್ರ ಬದುಕು ಸುಸೂತ್ರವಾಗಿ ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜನರು ಪರಿಸರ ಕಾಳಜಿಯಿಂದ ರಕ್ಷಿಸಬೇಕು ಎಂದು ಉರಗ ತಜ್ಞ ತೇಜಸ್ ಪುತ್ತೂರು ಹೇಳಿದರು.
ನಗರದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಪರಿಸರ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಡಿನ ನಾಶದಿಂದ ಪ್ರಾಣಿ ಪಕ್ಷಿಗಳು ನಾಡಿಗೆ ಬರುತ್ತಿವೆ. ಅವುಗಳ ರಕ್ಷಣೆ ಮಾಡಬೇಕು. ಹಾವುಗಳನ್ನು ಅವುಗಳ ಮೊಟ್ಟೆಗಳನ್ನು ರಕ್ಷಿಸಬೇಕು. ಅವುಗಳ ಸಂತತಿ ಕ್ಷೀಣವಾಗಬಾರದು ಎಂದರಲ್ಲದೆ ವಿಷಕಾರಿ, ವಿಷಕಾರಿಯಲ್ಲದ ಹಾವುಗಳ ಮಾಹಿತಿ, ಮುಂಜಾಗ್ರತೆ, ಹಾವು ಕಡಿದಾಗ ತತ್ ಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಮಿಥಾಲಿ ಪಿ.ರೈ ಮಾತನಾಡಿ, ಪ್ರತಿಯೊಂದು ಜೀವಿಗೂ ಬದುಕಲು ಅವಕಾಶ ಕಲ್ಪಿಸಬೇಕು, ಆಗ ನಾವು ಬದುಕಲು ಸಾಧ್ಯ. ಪರಿಸರ ರಕ್ಷಣೆ ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ ವಿನುತಾ ಕೆ.ಎನ್.ಸ್ವಾಗತಿಸಿ, ಪ್ರಸ್ತಾವನೆಗೈದರು. ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಸುಮಂತ್ ವಂದಿಸಿದರು.