ಪ್ರಕೃತಿಯೊಂದಿಗೆ ಬದುಕುವ ವಿಧಾನ : ಬಾಲಕೃಷ್ಣ ನೈಮಿಷ ಹೇಳಿಕೆ

pattur
ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಉದ್ಯಮಿ ಬಾಲಕೃಷ್ಣ ನೈಮಿಷ, ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಮಾತ್ರವಲ್ಲದೆ ಪ್ರಕೃತಿಯೊಂದಿಗೆ ಬದುಕುವ ನೈಜ ಜೀವನ ಪದ್ಧತಿಯನ್ನು ತಿಳಿಹೇಳಲಾಗುತ್ತಿದೆ. ಶಾಲೆಯಲ್ಲಿ ಈಗಾಗಲೇ ಮಗುವಿಗೊಂದು ಮರ ಎನ್ನುವ ಯೋಜನೆ ಹಾಕಿದ್ದು, ಪ್ರತಿ ಮಗು ಶಾಲೆಯಲ್ಲಿ ಅಥವಾ ಮನೆಯಲ್ಲಿ ಗಿಡ ನೆಟ್ಟು ಪೋಷಿಸಲಿದ್ದಾರೆ ಎಂದು ಉದ್ಯಮಿ ಬಾಲಕೃಷ್ಣ ನೈಮಿಷ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ಆವರಣದಲ್ಲಿ ಗಿಡನೆಟ್ಟು ಮಾತನಾಡಿದರು.

ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಮಾತನಾಡಿ, ಗಿಡ ನೆಟ್ಟು ಪೋಷಿಸುವ ಕಾರ್ಯ ಕೇವಲ ಪರಿಸರ ದಿನಾಚರಣೆಗಷ್ಟೇ ಸೀಮಿತವಾಗಿರದೆ, ಪ್ರಕೃತಿಯೊಂದಿಗೆ ನಾವು ನಿರಂತರ ಸಂಬಂಧ ಇರಿಸಿಕೊಳ್ಳುವಂತಿರಬೇಕು ಎಂದರು.

ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಮಾತನಾಡಿ, ಕಳೆದ ವರ್ಷವೂ ಹಲವು ಔಷಧೀಯ ಗಿಡ ನೆಟ್ಟು ಪೋಷಿಸಲಾಗಿದೆ. ಈ ವರ್ಷವೂ ಮುಂದುವರಿಸಿಕೊಂಡು ಹೋಗಲಿದ್ದೇವೆ ಎಂದರು.

ವಿದ್ಯಾರ್ಥಿಗಳ ಮನೆಯಿಂದ ತಂದಿರುವ ಗಿಡಗಳನ್ನು ಶಾಲಾ ತೋಟದಲ್ಲಿ ನೆಡಲಾಯಿತು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net