ಮಾನವ ಸರಪಳಿ ಮೂಲಕ ವಿಶ್ವಪ್ರಜಾಪ್ರಭುತ್ವ ದಿನ ಆಚರಣೆ; ಮಹಾದೇವಪ್ಪ

HC-Mahadevappa
Published on

ಬೆಂಗಳೂರು: ಸಂವಿಧಾನದ ಮಹತ್ವ ಮನವರಿಕೆ ಮಾಡಿಕೊಡಲು ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ಮೂಲಕ ವಿಶ್ವ ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಡಿ.ಮಹಾದೇವಪ್ಪ ಹೇಳಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣೆ, ಪೌರ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿ ಭಾನುವಾರ ವಿಶ್ವಪ್ರಜಾಪ್ರಭುತ್ವ ದಿನ ಆಚರಿಸುತ್ತೇವೆ. ಸಮಾನತೆ, ಸಮಾನ ಅವಕಾಶ, ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಒದಗಿಸಲು ಸಂವಿಧಾನ ಅನಿವಾರ್ಯ. ಇತ್ತೀಚಿಗೆ ಸಂವಿಧಾನದ ಆಶಯಕ್ಕೆ ಧಕ್ಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳನ್ನು ತಿಳಿಸಲು ವಿಶ್ವ ಪ್ರಜಾಪ್ರಭುತ್ವ ದಿನದ ಆಚರಣೆ ಅವಶ್ಯ ಎಂದು ಪ್ರತಿಪಾದಿಸಿದರು.

ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಬುದ್ಧನ ರಾಷ್ಟ್ರ ಎಂದು ಪ್ರಪಂಚ ಭಾರತವನ್ನು ಗೌರವಿಸುತ್ತದೆ. ಪ್ರಜಾಪ್ರಭುತ್ವ ಆಡಳಿತದಿಂದ ಬೇರೆ ಬೇರೆ ದೇಶಗಳು ಸರ್ವಾಧಿಕಾರಿ ಆಡಳಿತಕ್ಕೆ ಹೋದರೂ ಭಾರತದಲ್ಲಿ ಮಾತ್ರ ಎಷ್ಟೇ ಏಳೂ ಬೀಳಾದರೂ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂದರು.

ದೇಶದ ಸಂವಿಧಾನದ ಒಳಗೆ ಅಡಕವಾಗಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳಿಗೆ ಬದ್ದವಾಗಿರುವ ಕರ್ನಾಟಕ ಸರ್ಕಾರವು ವಿನೂತನವಾಗಿ ವಿಶ್ವಪ್ರಜಾಪ್ರಭುತ್ವ ದಿನ ಆಚರಿಸಲಿದೆ. ಇದು ಇನ್ನೊಂದು ಮೈಲಿಗಲ್ಲು ಸೃಷ್ಟಿಸಲಿದೆ. ಈ ಬಾರಿಯ ಪ್ರಜಾಪ್ರಭುತ್ವ ದಿನವನ್ನು ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಂತೆ ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಸುಮಾರು 2500 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ಸರಪಳಿ ರಚಿಸಿ, ಮಾರ್ಗದುದ್ದಕ್ಕೂ ಕಾರ್ಯಕ್ರಮದ ಮುಕ್ತಾಯದ ನಂತರ ಅರಣ್ಯ ಇಲಾಖೆಯ ಸಹಯೋಗದಲ್ಲಿ 10ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಜನರ ದೊಡ್ಡ ಬೆಂಬಲ ದೊರೆಯಲಿದ್ದು, ಇಡೀ ದೇಶ ಹಾಗೂ ಜಗತ್ತು ಕರ್ನಾಟಕದ ಕಡೆ ತಿರುಗಿ ನೋಡುವುರಲ್ಲಿ ಅನುಮಾನವೇ ಇಲ್ಲ ಎಂದು ಮಹಾದೇವಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net