

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ಉದ್ಯಮಶೀಲತೆಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂಬುದಾಗಿ ಕೃಷಿ ಸಚಿವ ಪಿ.ಪ್ರಸಾದ್ ತಿಳಿಸಿದರು.
ಸಿಪಿಸಿಆರ್ಐ ಕಾಸರಗೋಡು ವತಿಯಿಂದ ಸೋಮವಾರ ಸಿಪಿಸಿಆರ್ಐ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ತೆಂಗು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ತೋಟಗಾರಿಕಾ ವಿಜ್ಞಾನ ವಿಭಾಗದ ಮಹಾನಿರ್ದೇಶಕ ಉಪನಿರ್ದೇಶಕ ಡಾ.ಎಸ್.ಕೆ.ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅಮೃತ್ಪುರಿ ಎಚ್ಯುಟಿ ಲ್ಯಾಬ್ ನಿರ್ದೇಶಕ ಡಾ.ರಾಜೇಶ್ಕಣ್ಣನ್, ಡಾ.ಬಿ.ಆಗಸ್ಟಿನ್ ಜೆರಾಲ್ಡ್ ಅತಿಥಿಯಾಗಿ ಭಾಗವಹಿಸಿದರು.
ಸಿಪಿಸಿಆರ್ಐ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಿಪಿಸಿಆರ್ಐನ ನವೀನ ತಂತ್ರಜ್ಞಾನ ಮತ್ತು ಕ್ಷೇತ್ರಗಳಲ್ಲಿ ಅದರ ಅಳವಡಿಕೆಯಂತಹ ಸಾಧನೆ ಬಗ್ಗೆ ಮಾಹಿತಿ ನೀಡಿದರು. ವಯನಾಡು ಸಂತ್ರಸ್ತರಿಗಾಗಿ ಸಿಪಿಸಿಆರ್ಐ ವತಿಯಿಂದ 3,66,000 ರೂ.ಮೊತ್ತದ ಚೆಕ್ಕನ್ನು ಸಚಿವ ಪಿ.ಪ್ರಕಾಶ್ ಅವರಿಗೆ ಬೆ.ಬಿ.ಹೆಬ್ಬರ್ ಹಸ್ತಾಂತರಿಸಿದರು. ಯಶಸ್ವಿ ಕೃಷಿಕರು, ಕೃಷಿ ಉದ್ಯಮಿಗಳು, ತೆಂಗು ಉತ್ಪಾದಕ ಕಂಪನಿದಾರರನ್ನು ಸನ್ಮಾನಿಸಲಾಯಿತು.
ಕೋಕೊನಟ್ ಫ್ಲೇವರ್ಡ್ ಮಿಲ್ಕ್’ಕಲ್ಪ ಬ್ಲಿಝ್’, ತೆಂಗಿನ ಪಾನೀಯ’ಝಿಲಾ’ ಹಾಗೂ ಕೃಷಿ ಸಂಬಂಧಿ ಬುಲ್ಲೆಟಿನ್ ಬಿಡುಗಡೆಗೊಳಿಸಲಾಯಿತು. ನಬಾರ್ಡ್ನ ಶರೋನ್ ನವಾಜ್ ಸಿಪಿಸಿಆರ್ಐ ಕೃಷಿ ಇಲಾಖೆಯ ಜ್ಯೋತಿಕುಮಾರಿ ಉಪಸ್ಥಿತರಿದ್ದರು. ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿದರು. ಸಮಾಜ ವಿಜ್ಞಾನ ವಿಭಾಗದ ಎಚ್ಒಡಿ ಡಾ.ಕೆ.ಪೊನ್ನುಸಾಮಿ ವಂದಿಸಿದರು. ರೈತರು, ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು, ಉದ್ಯಮಿಗಳು, ಉತ್ಪಾದಕ ಸಂಸ್ಥೆಗಳ ಪ್ರಾಯೋಜಕರು ಪಾಲ್ಗೊಂಡಿದ್ದರು. ಕೃಷಿಕರೊಂದಿಗೆ ಸಂವಾದ ನಡೆಯಿತು.