

ವಿಜಯವಾಣಿ ಸುದ್ದಿಜಾಲ ಉಡುಪಿ
ನಾವೆಲ್ಲ ಜನ್ಮದಿಂದಲೇ ದೇಹವಂತರಾಗಿದ್ದೇವೆ. ದೇಹವೆಂದರೆ ವಿವಿಧ ಅಂಗಾಂಗಗಳು. ಯಾವುದೇ ಅಂಗ ಸರಿ ಇಲ್ಲದಿದ್ದರೂ ಜೀವನಕ್ಕೆ ತೊಂದರೆ. ಹೀಗಾಗಿ ಅಂಗಾಂಗ ದಾನವೂ ಸಹ ಮಾನವೀಯ ಕಾರ್ಯವಾಗಿದೆ. ಇದರೊಂದಿಗೆ ರಕ್ತದಾನವೂ ಶ್ರೇಷ್ಠವಾಗಿದೆ ಎಂದು ಕುಂದಾಪುರ ರೆಡ್ ಕ್ರಾಸ್ನ ಸಭಾಪತಿ ಜಯಕರ ಶೆಟ್ಟಿ ಎಸ್. ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರೆಡ್ ಕ್ರಾಸ್ನ ಸಭಾಪತಿ ಡಾ. ಅಶೋಕ ವೈ.ಜಿ. ಮಾತನಾಡಿ, ರಕ್ತದಾನ ಮತ್ತು ನೇತ್ರದಾನದ ಮಹತ್ವ ವಿವರಿಸಿದರು. ಜಿಲ್ಲಾ ರೆಡ್ ಕ್ರಾಸ್ನ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತಾನಾಡಿ, ರಕ್ತದಾನ ಮತ್ತು ನೇತ್ರ ತಪಾಸಣೆ ಕುರಿತು ರೆಡ್ ಕ್ರಾಸ್ ಹಮ್ಮಿಕೊಳ್ಳುವ ಚಟುವಟಿಕೆ ವಿವರಿಸಿದರು.
ಹೆಚ್ಚು ಬಾರಿ ರಕ್ತದಾನ ಮಾಡಿದ ಉಮೇಶ ಪ್ರಭು, ಮಾರ್ಕ್ ವಿಜಯ ಡಿ'ಸೋಜಾ, ಸುಧಾಕರ ನಾಯಕ ಎ., ರಮೇಶ ಎಸ್. ತಿಂಗಳಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಡುಪಿ ಜಿಲ್ಲಾ ಕೆಮಿಸ್ಟ್-ಡ್ರಗ್ಗಿಸ್ಟ್ ಅಸೋಸಿಯೇಷನ್ನ ಅಧ್ಯಕ್ಷ ಅಮ್ಮುಂಜೆ ರಮೇಶ ನಾಯಕ, ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್, ಜಿಲ್ಲಾ ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರಾದ ವಿ.ಜಿ. ಶೆಟ್ಟಿ, ಚಂದ್ರಶೇಖರ, ಪ್ರಸಾದ ನೇತ್ರಾಲಯದ ವೈದ್ಯಾಧಿಕಾರಿ ಡಾ. ಮೋಹನ ಗೌಡ, ಕುಂದಾಪುರ ರೆಡ್ ಕ್ರಾಸ್ನ ಖಜಾಂಚಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ನೇತ್ರ ಜ್ಯೋತಿ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ರೆಡ್ ಕ್ರಾಸ್ ಸದಸ್ಯ ರಾಘವೇಂದ್ರ ಪ್ರಭು ಕರ್ವಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು.