

ಈ ಬಾರಿಯ ಗೌರಿ-ಗಣೇಶ ಹಬ್ಬದಲ್ಲಿ ಬಣ್ಣದ ಗಣಪ, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನ ಮೂರ್ತಿಗಳಿಗೆ ಬದಲಾಗಿ ನೈಸರ್ಗಿಕ ಮಣ್ಣಿನ ಗಣೇಶ ಮೂರ್ತಿಗಳ ಬಳಕೆ ಬಗ್ಗೆ ಅರಿವು ಮೂಡಿಸಲು ಪರಿಸರ ಬಳಗದ ಆಶ್ರಯದಲ್ಲಿ ಸೆ.9 ಮತ್ತು 10 ರಂದು ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ತಿಳಿಸಿದರು.
ಎರಡು ದಿನವೂ ಕುಕ್ಕರಹಳ್ಳಿ ಕೆರೆ ಆವರಣ, ಲಲಿತಮಹಲ್ ಬಳಿಯ ಮೈದಾನದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪ್ರತ್ಯೇಕ ಕಾರ್ಯಾಗಾರಗಳು ನಡೆಯಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಿಲ್ಪಕಲೆಯಲ್ಲಿ ಪರಿಣಿತಿ ಹೊಂದಿರುವ ಮತ್ತು ಅನುಭವವಿರುವ ಶಿಲ್ಪಿಗಳಿಂದ ಪ್ರತಿ ತಂಡದಲ್ಲಿ 35 ರಿಂದ 40 ಮಕ್ಕಳು ಹಾಗೂ ಸಾರ್ವಜನಿಕರು ಒಳಗೊಂಡಂತೆ ಒಟ್ಟು 300 ಜನರಿಗೆ ತರಬೇತಿ ನೀಡಲಾಗುವುದು. ಕುಂಬಾರರ ಬಳಿ ಮಣ್ಣು ತಂದು ಇವರೇ ತಯಾರಿಸಿ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುವುದು. ಈ ಕಾರ್ಯಾಗಾರದಲ್ಲಿ ವಿಶ್ವಪ್ರಜ್ಞಾ ಶಾಲೆ, ವಿದ್ಯಾಜ್ಯೋತಿ ಶಾಲೆ, ಜೆಎಸ್‌ಎಸ್ ಪ್ರೌಢಶಾಲೆ, ಈಶ್ವರ್ ವಿದ್ಯಾಲಯ ಮೊದಲಾದ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಸದಸ್ಯರಾದ ಗಂಟಯ್ಯ, ಎಸ್.ಸತೀಶ್, ಮಲ್ಲಮ್ಮ ಗಾಣಿಗಿ, ಭಾಗ್ಯ ಶಂಕರ್, ವೆಂಕಟೇಶ್ ಹಾಜರಿದ್ದರು.