

ಬಂಟ್ವಾಳ: ಅಡಕೆ ಕೀಳುತ್ತಿದ್ದ ಕಾರ್ಮಿಕನೋರ್ವ ಕಾಲು ಜಾರಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಪಾಣೆಮಂಗಳೂರಿನ ಬೋಳಂಗಡಿಯಲ್ಲಿ ನ.13ರಂದು ನಡೆದಿದೆ. ಬೋಳಂಗಡಿ ಮಜಲ್ ಮನೆ ನಿವಾಸಿ ಜೋನ್ ಲೋಬೊ(45) ಮೃತಪಟ್ಟ ಕಾರ್ಮಿಕ. ಜೋನ್ ಲೋಬೊ ಬುಧವಾರ ಬೋಳಂಗಡಿ ಪದ್ಮನಾಭ ಪ್ರಭು ಎಂಬುವರ ತೋಟದಲ್ಲಿ ಅಡಕೆ ಕೀಳುತ್ತಿದ್ದ ಸಂದರ್ಭದಲ್ಲಿ ಅಡಕೆ ಮರದಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅವರ ಪತ್ನಿ ಸ್ವಪ್ನ ವಿ.ಎಂ.ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.