ನಾವು ಎಂದಿಗೂ ಪಾಕಿಸ್ತಾನದ ಭಾಗವಾಗುವುದಿಲ್ಲ; ಫಾರೂಕ್ ಅಬ್ದುಲ್ಲಾ | Farooq Abdullah

National Conference Leader Farooq Abdullah
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ದಾಳಿಯ ಮೂಲ ಪಾಕಿಸ್ತಾನ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ(Farooq Abdullah) ಹೇಳಿದ್ದಾರೆ. ಪಾಕಿಸ್ತಾನಕ್ಕೆ ನಿರಂತರ ದಾಳಿಯನ್ನು ಕಡಿಮೆಗೊಳಿಸುವಂತೆ ಎಚ್ಚರಿಸಿದ್ದಾರೆ. ಸ್ನೇಹತರಾಗಲು ಒಂದು ಮಾರ್ಗವನ್ನು ಕಂಡುಕೊಳ್ಳದಿದ್ದರೆ ಆ ದೇಶಕ್ಕೆ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ತಿಳಿಸಿದ್ದಾರೆ.

ನಮಗೆ ಸೂಕ್ತ ಪರಿಹಾರ ಸಿಗುವವರೆಗೆ ರಾಜ್ಯದಲ್ಲಿ ಈ (ಭಯೋತ್ಪಾದನಾ) ದಾಳಿಯು ಮುಂದುವರಿಯುತ್ತದೆ. ನಮಗೆಲ್ಲ ಮೂಲ ಅರಿವಿದೆ, 30 ವರ್ಷಗಳಿಂದ ಅಮಾಯಕರ ಹತ್ಯೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ.ಆದರೆ ಇದು ಪ್ರತಿ ವರ್ಷವೂ ಮುಂದುವರಿಯುತ್ತದೆ. ಅವರು (ಪಾಕಿಸ್ತಾನ) ಏಕೆ ಹೀಗೆ ವಿಧ್ವಂಸಕ ಮಾಡುತ್ತಿದ್ದಾರೆ. ಇದೆಲ್ಲವೂ ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ಒಂದುಗೂಡಿಸಲು ಸಹಾಯ ಮಾಡುತ್ತದೆ ಎಂದು ಅವರು ತಪ್ಪಾಗಿ ಭಾವಿಸುತಿದ್ದಾರೆ. ನಾವು ಎಂದಿಗೂ ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ.

ಅವರು ನಮ್ಮ ಭವಿಷ್ಯವನ್ನು ಹಾಳು ಮಾಡಬಹುದು ಎಂದುಕೊಳ್ಳುವ ಬದಲು ಅವರು ತಮ್ಮ ದೇಶವನ್ನು ನೋಡಬೇಕು. ತಮ್ಮ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನಹರಿಸದಿದ್ದರೆ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ. ಅವರು ಯೂಕ್ರೇನ್, ಇರಾನ್​​, ಪ್ಯಾಲೆಸ್ಟೀನ್​​, ಲೆಬನಾನ್​​ನಲ್ಲಿ​​​ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ದಾಳಿಗಳು ತೀವ್ರ ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು. ಇದೇ ಸಮಯದಲ್ಲಿ ನಾನು ಈ ದಾಳಿಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಪ್ರಾಣ ಕಳೆದುಕೊಂಡವರ ಪ್ರೀತಿಪಾತ್ರರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇದರೊಂದಿಗೆ ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹಮಾಲರು ನಿನ್ನೆ ಮೃತಪಟ್ಟಿದ್ದಾರೆ. ಮೂವರು ಯೋಧರು ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ನಂತರ ಹುತಾತ್ಮರಾಗಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನಿಂದ ಆರು ಕಿಲೋಮೀಟರ್ ದೂರದಲ್ಲಿರುವ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಅಫ್ರಾವತ್ ವ್ಯಾಪ್ತಿಯ ನಾಗಿನ್ ಪೋಸ್ಟ್ ಕಡೆಗೆ ಹೋಗುತ್ತಿದ್ದಾಗ ಬೂತಪತ್ರಿ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಪ್ರದೇಶವು ಸಂಪೂರ್ಣವಾಗಿ ಸೇನೆಯ ವಶದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net