ಮಹಿಳೆಯರ ಡಿಜಿಟಲ್ ಹೆಜ್ಜೆಗುರುತು; ಆರ್ಥಿಕ ಸಬಲತೆಗೆ ಮುನ್ನುಡಿ

Lalitha F
Published on

ಮಹಿಳೆಯ ಬದುಕು ನಾಲ್ಕು ಗೋಡೆಗಳ ನಡುವೆಯಷ್ಟೇ ಸೀಮಿತವಲ್ಲ. ಅತಿಯಾದ ಮಿತಿಗಳಿಂದ ಸ್ವತಂತ್ರರಾಗುವ ನಿಟ್ಟಿನಲ್ಲಿ ಹೆಜ್ಜೆ ಇರಿಸುತ್ತಿರುವ ಮಹಿಳೆಯರು ಇಂದು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಬಲ ರಾಗುತ್ತಿದ್ದಾರೆ. ಜತೆಜತೆಗೆ ಡಿಜಿಟಲೀಕರಣದ ಕಡೆಗೆ ದಾಪುಗಾಲು ಹಾಕುತ್ತಿದ್ದಾರೆ. ಡಿಜಿಟಲೀಕರಣದ ವೇಗಕ್ಕೆ ಒಗ್ಗಿಕೊಂಡು ಮುನ್ನಡೆಯುವುದನ್ನೂ ಅರಿಯ ತೊಡಗಿದ್ದಾರೆ. ಡಿಜಿಟಲ್ ಜಗತ್ತಿನೊಳಗೆ ಮಹಿಳೆಯರ ಹೆಜ್ಜೆಗುರುತನ್ನು ಹುಡುಕುವ ಪ್ರಯತ್ನ ಇಲ್ಲಿದೆ.

| ಮಧುರಾ ಎಲ್ ಭಟ್ಟ

ಡಿಜಿಟಲ್ ಇಂಡಿಯಾ ಭಾರತದಲ್ಲಿ ಸರಿಸುಮಾರು 40 ಲಕ್ಷ ಉದ್ಯೋಗಗಳನ್ನು ಒದಗಿಸಿದೆ. ಈ ಪೈಕಿ ಶೇ.30 ಮಹಿಳೆಯರೇ ಎಂಬುದು ಖುಷಿಯ ವಿಚಾರ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಾವೇನು ಕಮ್ಮಿಯಿಲ್ಲ ಎಂಬಂತೆ ಸಮಾನತೆ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಮಹಿಳೆಯರು ಡಿಜಿಟಲ್ ಅವಕಾಶ ಬಳಸಿಕೊಂಡು ಉದ್ಯೋಗಸ್ಥರಾಗುತ್ತಿರುವುದು ಅಭಿವೃದ್ಧಿ ಪರ್ವಕ್ಕೆ ಮತ್ತಷ್ಟು ವೇಗ ಒದಗಿಸಿದೆ. ಡಿಜಿಟಲೀಕರಣ ಬರಿಯ ನಗರ ಪ್ರದೇಶದ ಮಹಿಳೆಯರಿಗೆ ಸೀಮಿತವಾಗಿರದೆ ಗ್ರಾಮೀಣ ಭಾಗಗಳಲ್ಲೂ ಮಹಿಳೆಯರು ಡಿಜಿಟಲ್ ಸಾಧ್ಯತೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಇದಕ್ಕೆ ಸಂಬಂಧಿಸಿ ಗ್ರಾಮೀಣ ಭಾರತವು 3 ವರ್ಷದ ಜಾಗೃತಿ ಕಾರ್ಯಕ್ರಮದ ಮುಖಾಂತರ ಮಹಿಳೆಯರು ಡಿಜಿಟಲ್ ವ್ಯವಹಾರಗಳನ್ನು ಸ್ವತಂತ್ರವಾಗಿ ನಿರ್ವಹಿಸುವಂತೆ ಉತ್ತೇಜಿಸುತ್ತಿದೆ. ಅಲ್ಲದೆ ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ (ಬಿಪಿಒ) ಉದ್ಯಮದಲ್ಲಿ ನಾರಿಯರಿಗೆ ಅವಕಾಶ ಹೆಚ್ಚಿಸಿದೆ. ಇದರಿಂದ 54,800ಕ್ಕೂ ಅಧಿಕ ಮಹಿಳೆಯರು ಸರ್ಕಾರಿ ನಿಗಾದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಗ್ರಾಮಮಟ್ಟದ ಉದ್ಯಮಿಗಳಾಗಿದ್ದಾರೆ. ಅಲ್ಲದೆ, ಸ್ಥಳೀಯ ಜನಸಮುದಾಯಕ್ಕೆ ಡಿಜಿಟಲ್ ಸೇವೆ ಒದಗಿಸುವಲ್ಲಿ ನೆರವಾಗುತ್ತಿದ್ದಾರೆ.

ಡಿಜಿಟಲ್ ಉದ್ಯೋಗಗಳು: ಇತ್ತ ಮಹಿಳೆಯರು ಡಿಜಿಟಲೀಕರಣದತ್ತ ತೆರೆದುಕೊಳ್ಳುತ್ತಿರುವಂತೆಯೇ ಅತ್ತ ಅವರ ಜೀವನ ಮಟ್ಟವೂ ಸುಧಾರಿಸುತ್ತಿರುವುದು ಗಮನಾರ್ಹ. ಡಿಜಿಟಲ್ ಸಾಧ್ಯತೆ ಹೊರತುಪಡಿಸಿ, ಇಂದು ಮಹಿಳೆಯರು ಆಟೋ ಚಾಲಕರಾಗಿ, ಬಸ್ ಚಾಲಕರಾಗಿ, ಕಂಡಕ್ಟರ್​ಗಳಾಗಿ, ಕ್ಯಾಬ್ ಚಾಲಕರಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರತಿ ಕ್ಷೇತ್ರದಲ್ಲೂ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗಾಗಿ ಸರ್ಕಾರಗಳೂ ಡಿಜಿಟಲ್ ಸೇವೆಗಳ ವಿತರಣಾ ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಡಿಜಿಟಲ್ ಸೇವೆಗಳಿಗೆ ಪ್ರವೇಶ ಒದಗಿಸುತ್ತಿರುವುದು ಗ್ರಾಮೀಣ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಎನ್ನಬಹುದು. ಡಿಜಿಟಲ್ ವ್ಯವಸ್ಥೆಯ ಉತ್ತೇಜನದಿಂದ ಮಹಿಳೆಯರು ಕ್ರಮೇಣ ಸಬಲರಾಗುವ ಜತೆಗೆ ಸ್ವಾಯತ್ತ, ಯೋಜನೆ ಆಧಾರಿತ ಕೆಲಸಗಳನ್ನು ಸಹಜ ವಾಗಿಯೇ ಬಯಸುತ್ತಿದ್ದಾರೆ.Truelancer, Flexing It ಮತ್ತು People per hour ನಂತಹ ಆನ್​ಲೈನ್ ವೇದಿಕೆಗಳು ಸ್ವತಂತ್ರ ವೃತ್ತಿ ಪರರಿಗೆ ಪ್ರಪಂಚದಾದ್ಯಂತ ಸಂಭಾವ್ಯ ಉದ್ಯೋಗದಾತರೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಉದ್ಯೋಗ ಅರಸುವಲ್ಲಿ ಅನುವು ಮಾಡಿಕೊಡುತ್ತಿದೆ.

STEMನಲ್ಲಿ ಮಹಿಳೆಯರ ಭಾಗವಹಿಸುವಿಕೆ: ಮಹಿಳೆಯರು ಇಂದು ಡಿಜಿಟಲ್ ಜಗತ್ತಿನೊಳಗೆ ಕಾಲಿರಿಸಿದ್ದರೂ, ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸುವುದು ಬಾಕಿ ಇದೆ. ತ್ವರಿತಗತಿಯಲ್ಲಿ ಬೆಳೆಯುತ್ತಿರುವ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (STEM) ಮುಂಚೂಣಿ ತಂತ್ರಜ್ಞಾನಗಳ ಅಭಿವೃದ್ಧಿಯ ಕೇಂದ್ರಬಿಂದುಗಳಾಗಿ ಹೊರಹೊಮ್ಮಿವೆ. ಇವುಗಳು ಸಾಮಾನ್ಯವಾಗಿ ಪುರುಷ ಪ್ರಾಬಲ್ಯ ಹೊಂದಿವೆ. ತಂತ್ರಜ್ಞಾನ ಸೃಷ್ಟಿಯ ಈ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಕೊಳ್ಳಬೇಕಾದರೆ, ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಮಹಿಳೆಯರಿಗೆ ಈ ವಿಷಯಗಳನ್ನು ಅಧ್ಯಯಿಸುವ ಸಲುವಾಗಿ ಅವಕಾಶ ಕಲ್ಪಿಸುವುದು ಮತ್ತು ಕೌಶಲಕ್ಕೆ ಅನುಗುಣವಾದ ವೃತ್ತಿ ಪ್ರವೇಶಿಸಲು ಪ್ರೋತ್ಸಾಹಿಸುವುದು ಅವಶ್ಯಕ. ತಂತ್ರಜ್ಞಾನದ ಅಭ್ಯುದಯದಲ್ಲಿ ಪುರುಷರಷ್ಟೇ ಸಮಾನ ಹಕ್ಕನ್ನು ಮಹಿಳೆ ಯರಿಗೆ ನೀಡಬೇಕು. ಡಿಜಿಟಲ್ ಸಾಕ್ಷರತೆಯ ಪ್ರಾಮುಖ್ಯತೆಯನ್ನು ಅರ್ಥೈಸಿ ಪ್ರೋತ್ಸಾಹಿಸುವ ವ್ಯವಸ್ಥೆಗಳ ಸೃಷ್ಟಿ ಮತ್ತು ನಿರ್ವಹಣೆ ಆಡಳಿತಗಳ ಹೊಣೆಗಾರಿಕೆಯೂ ಹೌದು.

ಡಿಜಿಟಲೀಕರಣ ವಿಶ್ವವ್ಯಾಪಿಯಾಗಿದೆ. ಅಂದರೆ ತರಕಾರಿ ಮಾರುವವರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಗಳಲ್ಲೂ ಈ ವ್ಯವಸ್ಥೆ ಕಾಣಬಹದು. ಈ ಡಿಜಿಟಲೀಕರಣದಿಂದಾಗಿ ಮನೆಯಲ್ಲೇ ಕುಳಿತು ಮಹಿಳೆಯರು ಸುಲಭವಾಗಿ ಕೆಲಸ ನಿರ್ವಹಿಸಬಹುದು. ಆದರೆ ಇದನ್ನು ಆಪರೇಟ್ ಮಾಡಲು ಜಾಣ್ಮೆ ಮುಖ್ಯ. ನಾವು ಜಾಗರೂಕರಾಗಿದ್ದಾಗ ಇದನ್ನು ಬಳಸಬಹುದು. ಅಜಾಗರೂಕರಾದರೆ ಒಳಿತಿಗಿಂತ ಕೆಡುಕಾಗುವ ಸಂದರ್ಭವೇ ಹೆಚ್ಚು. ಇದರ ನಡುವೆ ಈ ಕೋವಿಡ್ ಮಹಾಮಾರಿಯಿಂದ ಡಿಜಿಟಲೀಕರಣಕ್ಕೆ ಪೆಟ್ಟು ಬಿದ್ದಿರುವುದಂತೂ ನಿಜ. ಈ ಸಮಯದಲ್ಲಿ ಅದೆಷ್ಟೋ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಚಿಕ್ಕ ಚಿಕ್ಕ ವ್ಯಾಪಾರ - ವ್ಯವಹಾರ ನಡೆಸುವವರು ನಷ್ಟ ಅನುಭವಿಸಿದ್ದಾರೆ. ಈ ಕಷ್ಟ-ನಷ್ಟಗಳಿಗೆ ಮಹಿಳೆಯರು ತಲೆಕೆಡಿಸಿಕೊಳ್ಳದೆ ಮೊದಲಿನಂತೆ ಡಿಜಿಟಲೀಕರಣದತ್ತ ಹೆಜ್ಜೆ ಹಾಕಬೇಕಿದೆ. | ಜಾಹ್ನವಿ ಎಸ್ ಹೆಗಡೆ ಶಿಕ್ಷಕಿ

ಕರೊನಾ ನಂತರದಲ್ಲಿ: ಕರೊನಾ ಸಂಕಷ್ಟ ಬಹುತೇಕ ಎಲ್ಲರ ಬದುಕಿನಲ್ಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಆದರೂ ಡಿಜಿಟಲ್ ಅವಕಾಶ ಬಳಸಿಕೊಂಡು ಹೊಸ ಸಾಧ್ಯತೆಗಳು ಗೋಚರವಾಗಿವೆ. ಮಹಿಳೆಯರು ತಂತ್ರಜ್ಞಾನ ಅಭ್ಯುದಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಸಬಲೀಕರಣದ ಹೆಗ್ಗುರುತಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾಮಾಜಿಕ ಕಳಕಳಿಯುಳ್ಳ ಸೇವಾ-ಸಂಸ್ಥೆಗಳು ಮಹಿಳಾ ಸಬಲೀಕರಣದ ಪ್ರಕ್ರಿಯೆಯಲ್ಲಿ ವಿನೂತನ ಆಲೋಚನೆಗಳ ಅನುಷ್ಠಾನದೊಂದಿಗೆ ಸಕ್ರಿಯ ಪಾತ್ರ ವಹಿಸಬೇಕಿದೆ.

ವ್ಯಾಪಾರ ನಡೆಸಲು ಅವಕಾಶ: ಹಿಂದೆಲ್ಲ ವ್ಯಾಪಾರ ವಹಿವಾಟಿನಲ್ಲಿ ಪುರುಷರಿಗೆ ಪ್ರಾಧಾನ್ಯತೆ ನೀಡುತ್ತಿದ್ದ ಸಮಾಜ ಈಗ ಮಹಿಳೆಯರಿಗೂ ವ್ಯಾಪಾರ ನಡೆಸಲು ಅವಕಾಶ ನೀಡಿದೆ. ಅಲ್ಲದೆ ಇಂದು ಗ್ರಾಮೀಣ ಮಹಿಳೆಯರು ಬ್ಯಾಂಕ್​ಗಳಿಗೆ ಹಣ ಪಾವತಿಸುವಾಗ, ಸಾಲಪಡೆಯುವಾಗ ಮತ್ತು ತರಕಾರಿ, ಬಟ್ಟೆ, ಬುಟ್ಟಿ, ಹಾಲು ವ್ಯಾಪಾರ ಹೀಗೆ ಮುಂತಾದ ವ್ಯಾಪಾರ ವಹಿವಾಟುಗಳಲ್ಲಿ ಈ ಡಿಜಿಟಲೀಕರಣವನ್ನು ಬಳಸಿಕೊಳ್ಳುತ್ತಿದ್ದಾರೆ.

ಡಿಜಿಟಲ್ ಇಂಡಿಯಾದ ಕಿರು ಚಿತ್ರಣ: ದೇಶಾದ್ಯಂತ 2.10 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಹರಡಿರುವ 3.06 ಲಕ್ಷಕ್ಕೂ ಹೆಚ್ಚು ಡಿಜಿಟಲ್ ಸೇವೆಗಳ ವಿತರಣಾ ಕೇಂದ್ರಗಳ ವಿಶಾಲವಾದ ಜಾಲವನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಡಿಜಿಟಲ್ ಸೇವೆಗಳಿಗೆ ಪ್ರವೇಶವನ್ನು ಒದಗಿಸಲು ರಚಿಸಲಾಗಿದೆ; ಡಿಜಿಟಲ್ ಕೇಂದ್ರಗಳು ಅಂದಾಜು 10 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವುದರೊಂದಿಗೆ ಉದ್ಯೋಗ ಕ್ರಾಂತಿಗೂ ಕಾರಣವಾಗಿವೆ. ಮಾತ್ರವಲ್ಲದೆ ಗ್ರಾಮೀಣ ಉದ್ಯಮಿಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಮೂಲಕ ಹಿಂದುಳಿದ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದೆ; ದೇಶದಲ್ಲಿ 1.5 ಫ್ರೀಲಾನ್ಸ್ ಉದ್ಯೋಗಿಗಳು ಬಹುತೇಕ ಮಹಿಳೆಯರೇ ಆಗಿದ್ದಾರೆ; ಋತುಚಕ್ರ ಆರೋಗ್ಯ ಮತ್ತು 204 ಸ್ಯಾನಿಟರಿ ಪ್ಯಾಡ್ ಘಟಕಗಳನ್ನು ಸ್ಥಾಪಿಸಿ ಮಹಿಳೆಯರಲ್ಲಿ ಋತುಚಕ್ರದ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಸಿ.ಎಸ್.ಸಿಗಳು ಸ್ತ್ರೀ ಸ್ವಾಭಿಮಾನ್ ಉಪಕ್ರಮವನ್ನೂ ಕೈಗೊಂಡಿವೆ.

ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net