

ಡಂಬುಲಾ: ಶೆಫಾಲಿ ವರ್ಮ (81 ರನ್, 48 ಎಸೆತ, 12 ಬೌಂಡರಿ, 1 ಸಿಕ್ಸರ್) ಅಬ್ಬರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ವಿರುದ್ಧ 82 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಎ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ಗೇರಿದೆ. ಕಾಯಂ ನಾಯಕಿ ಹರ್ಮಾನ್ ಪ್ರೀತ್ ಸಿಂಗ್ ಬದಲಿಗೆ ಸ್ಮೃತಿ ಮಂದನಾ ಹಂಗಾಮಿಯಾಗಿ ತಂಡವನ್ನು ಮುನ್ನಡೆಸಿದರು.
ಇಲ್ಲಿನ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭಿಕ ಆಟಗಾರ್ತಿಯಾದ ದಯಾಳನ್ ಹೇಮಲತಾ(47) ಮತ್ತು ಶಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 178 ರನ್ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ನೇಪಾಳ ಆರಂಭದಲ್ಲೇ ಸತತವಾಗಿ ವಿಕೆಟ್ ಕಳೆದುಕೊಂಡು ಅಂತಿಮವಾಗಿ 9 ವಿಕೆಟ್ಗೆ 96 ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಕಮಾಲ್ ಮಾಡಿದ ದೀಪ್ತಿ ಶರ್ಮಾ 4 ಓವರ್ಗಳಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಪಡೆದರು.