ಅಪ್ರಾಪ್ತರ ಸಹಾಯದಿಂದ ಪತಿಯನ್ನೇ ಚಟ್ಟಕ್ಕೇರಿಸಿದ ಪ್ರಾಂಶುಪಾಲೆ! ಪೆಟ್ರೋಲ್ ಸುರಿದು ಗಂಡನ ದೇಹಕ್ಕೆ ಬೆಂಕಿ | Murder Case

ವಿಜಯವಾಣಿ - 2025-05-23T101158.396
Published on

Murder Case: ಪತಿಗೆ ಊಟದಲ್ಲಿ ವಿಷ ಉಣಿಸಿ ಹತ್ಯೆಗೈದ ಪಾಪಿ ಪತ್ನಿ, ತಾನು ಪ್ರಾಂಶುಪಾಲೆಯಾಗಿದ್ದ ಶಾಲೆಯ ವಿದ್ಯಾರ್ಥಿಗಳ ಸಹಾಯದಿಂದ ಗಂಡನ ದೇಹವನ್ನು ಸುಟ್ಟುಹಾಕಿದ ಭೀಕರ ಕೃತ್ಯ ಮುಂಬೈನಲ್ಲಿ ವರದಿಯಾಗಿದೆ.

ತಾನು ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸುತ್ತಿದ್ದ ಶಾಲೆಯ ಅಪ್ರಾಪ್ತ ವಿದ್ಯಾರ್ಥಿಗಳ ಸಹಾಯ ಪಡೆದ ಈಕೆ, ಹತ್ಯೆಗೈದ ಬಳಿಕ ಪತಿಯ ದೇಹವನ್ನು ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾಳೆ. ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದ್ದು, ಮಹಿಳೆಯನ್ನು ಇದೀಗ ಬಂಧಿಸಿದ್ದಾರೆ.

ಮೃತ ವ್ಯಕ್ತಿಯನ್ನು ನಾಗ್ಪುರದ ಶಾಂತನು ದೇಶಮುಖ್ (32) ಎಂದು ಗುರುತಿಸಲಾಗಿದೆ. ಸನ್‌ರೈಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಂಶುಪಾಲೆ ಆಗಿದ್ದ ನಿಧಿ ದೇಶಮುಖ್ (24) ಈ ಪಾಪ ಕೃತ್ಯವನ್ನು ಎಸಗಿದ ಮಹಿಳೆ. ಪ್ರಕರಣದ ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ನಿಧಿ ಅಪರಾಧ ಒಪ್ಪಿಕೊಂಡಿದ್ದಾಳೆ. ಪ್ರಾಂಶುಪಾಲೆ ಜೊತೆ ಕೈಜೋಡಿಸಿದ ಅಪ್ರಾಪ್ತ ವಿದ್ಯಾರ್ಥಿಗಳನ್ನು ಸದ್ಯ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಮೇ.15ರಂದು, ಚೌಸಲಾ ಅರಣ್ಯ ಪ್ರದೇಶದಲ್ಲಿ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಸುಟ್ಟ ದೇಹವೊಂದು ಪತ್ತೆಯಾಯಿತು. ವಿಧಿವಿಜ್ಞಾನ ತಂಡ ನಡೆಸಿದ ಪರೀಕ್ಷೆಯ ಬಳಿಕ ಪೊಲೀಸರಿಗೆ ಮೃತ ವ್ಯಕ್ತಿ ಶಾಂತನು ಎಂಬುದು ಸ್ಪಷ್ಟವಾಯಿತು. ಸ್ಥಳೀಯರ ಸಹಾಯದಿಂದ ಸುದೀರ್ಘ ತನಿಖೆ ನಡೆಸಿದ ಖಾಕಿಗೆ ಮೃತನ ಪತ್ನಿಯೇ ಇಷ್ಟೆಲ್ಲ ಘಟನೆಗೆ ಕಾರಣ ಎಂಬುದು ತಿಳಿಯಿತು. ಪ್ರಸ್ತುತ ಆರೋಪಿ ನಿಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅತಿಯಾದ ಕುಡಿತಕ್ಕೆ ದಾಸನಾಗಿದ್ದ ಪತಿ ನಡವಳಿಕೆಯಿಂದ ಬೇಸತ್ತಿದ್ದ ನಿಧಿ, ಮೇ.13ರಂದು ವಿಷ ಉಣಿಸಿ ರಾತ್ರಿ ವೇಳೆ ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಸುಟ್ಟುಹಾಕಲು ಸಂಚು ರೂಪಿಸಿದ ಆಕೆ, ತನ್ನ ಮನೆಗೆ ಟ್ಯೂಷನ್ ಹೇಳಿಸಿಕೊಳ್ಳಲು ಬರುತ್ತಿದ್ದ ಶಾಲಾ ವಿದ್ಯಾರ್ಥಿಗಳ ಸಹಾಯವನ್ನು ಕೋರಿದ್ದಾಳೆ. ಮರುದಿನ ಬೆಳಗ್ಗೆ, ನಾಲ್ವರೂ ಸೇರಿ ಯಾರೂ ಸಂಚರಿಸದ ನಿರ್ಜನ ಪ್ರದೇಶದಲ್ಲಿ ಮೃತ ದೇಹವನ್ನು ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net