ಮಹಿಳೆಯರಿಗೆ ಕೇಶವ ಕೋಟ್ಯಾನ್ ಸಲಹೆ
ಹೆಣ್ಣು ಮಕ್ಕಳ ಸ್ನೇಹಿ ಗ್ರಾಪಂ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಉಡುಪಿ
ಇಂದಿನ ಬಹುತೇಕ ಮಹಿಳೆಯರು ಕುಟುಂಬ ನಿರ್ವಹಣೆಯೊಂದಿಗೆ ಉದ್ಯೋಗವನ್ನೂ ನಿಭಾಯಿಸಬೇಕಿದ್ದು, ಒತ್ತಡದ ದಿನಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಆರೋಗ್ಯ ರಕ್ಷಣೆಯತ್ತಲೂ ಮಹಿಳೆ ನಿಗಾವಹಿಸಬೇಕು ಎಂದು 80 ಬಡಗಬೆಟ್ಟು ಗ್ರಾಪಂನ ಅಧ್ಯಕ್ಷ ಕೇಶವ ಕೋಟ್ಯಾನ್ ಸಲಹೆ ನೀಡಿದರು.

ಉಡುಪಿಯ 80 ಬಡಗಬೆಟ್ಟು ಗ್ರಾಪಂ ವತಿಯಿಂದ ಆದರ್ಶನಗರ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ತಾಯಂದಿರ ದಿನದ ನಿಮಿತ್ತ ಮೇ 9ರಂದು ಆಯೋಜಿಸಿದ್ದ ಮಹಿಳಾ ಮತ್ತು ಹೆಣ್ಣು ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರ ಸಹಕಾರ ಅಗತ್ಯ
ಈಗಾಗಲೇ ಗ್ರಾಪಂ ವ್ಯಾಪ್ತಿಯ ಎಲ್ಲ ಜನರ ಸಹಕಾರದಿಂದ ಪಂಚಾಯಿತಿ ವಿವಿಧ ಪ್ರಶಸ್ತಿ ಗಳಿಸಿದ್ದು, ಮಹಿಳಾ ಮತ್ತು ಹೆಣ್ಣು ಮಕ್ಕಳ ಸ್ನೇಹಿ ಗ್ರಾಪಂ ಪ್ರಶಸ್ತಿಗೆ ಆಯ್ಕೆಯಾಗಲು ವ್ಯಾಪ್ತಿಯ ಎಲ್ಲ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಸಹಕಾರ ಅಗತ್ಯ ಎಂದರು.
ಊರಿನಲ್ಲಿರುವ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆ ಮಂಜುಳಾ ನೆರವೇರಿಸಿದರು. ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಗ್ರಾಪಂ ವತಿಯಿಂದ ಕೊಡೆ ವಿತರಿಸಲಾಯಿತು. ಆರೋಗ್ಯ ಇಲಾಖೆಯ ವತಿಯಿಂದ ಹಿರಿಯ ನಾಗರಿಕರಿಗೆ ಬಿಸಿಜಿ ಚುಚ್ಚುಮದ್ದು ನೀಡಲಾಯಿತು.
ಹೆರ್ಗ ಆರೋಗ್ಯ ಸಹಾಯಕಿ ಹರಿಣಾಕ್ಷಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪ.ಪಂಗಡದ ಮಹಿಳೆಯರು, ಹಿರಿಯ ನಾಗರಿಕರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಆರೋಗ್ಯ ಸಹಾಯಕಿ ಯಮುನಾ ಅವರು ಆರೋಗ್ಯ ಮಾಹಿತಿ ನೀಡಿ, ಕಾರ್ಯಕ್ರಮ ನಿರೂಪಿಸಿದರು.