ಮೊದಲ ಪತಿ ಆ್ಯಸಿಡ್ ಎರಚಿದ! ಎರಡನೇ ಗಂಡ ನಡುರಸ್ತೆಯಲ್ಲೇ ಬಿಟ್ಟೋದ; ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ಮಹಿಳೆ | Tragedy

ವಿಜಯವಾಣಿ (36)
Published on

Tragedy: ಮೊದಲ ಪತಿ ಆ್ಯಸಿಡ್​ ಎರಚಿದ ಬಳಿಕ ವಿಚ್ಛೇದನದ ಮೂಲಕ ಆ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಮಹಿಳೆ, ಎರಡನೇ ಪತಿಯಿಂದಾದರೂ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದು ಇದೀಗ ಅದೂ ಹುಸಿಯಾಗಿದೆ. ಈ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ವರದಿಯಾಗಿದೆ.

ಎರಡನೇ ಪತಿಯ ಚಿತ್ರಹಿಂಸೆಯಿಂದ ಬಳಲುತ್ತಿದ್ದ ಮಹಿಳೆ ಕಾಲುವೆಯ ದಡದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದದ್ದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಖಾಕಿ ಪಡೆ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದೆ.

ಏನಿದು ಘಟನೆ?

ಶಬ್ನಮ್ ಈ ಮೊದಲು ಸಹರಾನ್‌ಪುರದ ನವಾಬ್ ಎಂಬ ಯುವಕನನ್ನು ಮದುವೆಯಾಗಿದ್ದಳು. ಕೆಲವೇ ತಿಂಗಳುಗಳಲ್ಲಿ, ಇವರಿಬ್ಬರ ದಾಂಪತ್ಯ ಸಂಬಂಧ ಹದಗೆಡಲು ಪ್ರಾರಂಭಿಸಿತು. ಆಗಾಗ್ಗೆ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಗಳಿಗೆ ಜಗಳಗಳು ನಡೆಯುತ್ತಿತ್ತು. ಒಂದು ದಿನ, ಕೋಪದ ಭರದಲ್ಲಿ, ನವಾಬ್ ತನ್ನ ಪತ್ನಿಯ ಮೇಲೆ ಆ್ಯಸಿಡ್ ಎರಚಿ, ಆಕೆಯ ಮುಖವನ್ನು ಸುಟ್ಟುಹಾಕಿದ್ದ. ಈ ನೋವು, ಅವಮಾನವನ್ನು ಸಹಿಸಲಾರದ ಮಹಿಳೆ, ಪತಿಗೆ ವಿಚ್ಛೇದನ ನೀಡಿದಳು.

ಆ್ಯಸಿಡ್​ ದಾಳಿಯಲ್ಲಿ ಮುಖ ಸುಟ್ಟುಹೋದರೂ, ಶಬ್ನಮ್ ಧೈರ್ಯಶಾಲಿಯಾಗಿ, ಮತ್ತೊಮ್ಮೆ ಹೊಸ ಜೀವನವನ್ನು ಕಟ್ಟಿಕೊಳ್ಳಲು ನಿರ್ಧರಿಸಿದಳು. ಈ ನಿಟ್ಟಿನಲ್ಲಿ ಶಂಶೇರ್ ಎಂಬ ವ್ಯಕ್ತಿಯೊಂದಿಗೆ ಎರಡನೇ ವಿವಾಹವಾದ ಶಬ್ನಮ್​, ರೂರ್ಕಿಯ ಕಲಿಯಾರ್ ಶರೀಫ್‌ನಲ್ಲಿ ಗಂಡನೊಂದಿಗೆ ವಾಸವಿದ್ದಳು. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಈ ಸಂಬಂಧದಲ್ಲಿಯೂ ಆಕೆಗೆ ಕಣ್ಣೀರೇ ಗತಿ ಎನ್ನುವಂತಾಗಿತ್ತು.

ಪ್ರವಾಸಕ್ಕೆ ಕರೆದೊಯ್ಯುವ ಭರವಸೆ ಕೊಟ್ಟು ಆಕೆಯನ್ನು ಯಾರು ಓಡಾಡದ ಕಾಲುವೆಯ ಬಳಿ ಬಿಟ್ಟು ಶಂಶೇರ್ ಪರಾರಿಯಾಗಿದ್ದ. ಇತ್ತ ದಾರಿಯೂ ತಿಳಿಯದೆ, ಹಣವೂ ಇಲ್ಲದೆ ಹಸಿವು ಮತ್ತು ಬಾಯಾರಿಕೆಯಿಂದ ಪ್ರಜ್ಞಾಹೀನಳಾಗಿದ್ದಳು. ಇದೇ ವೇಳೆ ಮಿಷನ್ ಶಕ್ತಿ ಅಭಿಯಾನದಡಿಯಲ್ಲಿ ಗಸ್ತು ತಿರುಗುತ್ತಿದ್ದ ಮಹಿಳಾ ಪೊಲೀಸ್ ತಂಡವು ಆಕೆಯನ್ನು ಸ್ಥಳೀಯರ ಮಾಹಿತಿ ಮೇರೆಗೆ ಗಮನಿಸಿ, ಆಸ್ಪತ್ರೆಗೆ ದಾಖಲಿಸಿತು. ಬಳಿಕ ಮಹಿಳೆಯ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ, ಘಟನೆಯನ್ನು ವಿವರಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net