

ಇಸ್ಲಾಮಾಬಾದ್: ಪ್ಯಾನಲ್ ಡಿಬೇಟ್ ಎಂದರೆ ಅಲ್ಲಿ ಜಗಳ ಇದ್ದೇ ಇದೆ ಎಂದರ್ಥ. ಆದರೆ ಪಾಕಿಸ್ತಾನದಲ್ಲಿ ನಡೆದ ಪ್ಯಾನಲ್ ಡಿಬೇಟ್ ಮಾತ್ರ ತೀರಾ ವಿಶೇಷ. ಏಕೆಂದರೆ ಆ ಡಿಬೇಟ್ನಲ್ಲಿ ಮಹಿಳಾ ನಾಯಕಿಯೊಬ್ಬರು ಸಂಸದನ ಕೆನ್ನೆಗೆ ಲೈವ್ನಲ್ಲೇ ಬಾರಿಸಿದ್ದಾರೆ. ಆ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಪಾಕಿಸ್ತಾನದ ಎಕ್ಸ್ಪ್ರೆಸ್ ವಾಹಿನಿಯಲ್ಲಿ ಪ್ಯಾನಲ್ ಡಿಬೇಟ್ ಒಂದು ನಡೆಯುತ್ತಿತ್ತು. ಅದರಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಪರವಾಗಿ ಪಕ್ಷದ ನಾಯಕಿ ಡಾ.ಫಿರ್ದೌಸ್ ಆಶಿಕ್ ಭಾಗವಹಿಸಿದ್ದರು. ಅವರ ಜತೆ ಪ್ರತಿಪಕ್ಷದ ಖಾದಿರ್ ಖಾನ್ ಮಂಡೋಖೈಲ್ ಕೂಡ ಇದ್ದರು. ಯಾವುದೋ ವಿಚಾರದಲ್ಲಿ ಇಬ್ಬರ ನಡುವಿನ ವಾದ ವಿವಾದ ತಾರಕಕ್ಕೇರಿದೆ. ಸಿಟ್ಟು ಹೆಚ್ಚಾದ ನಂತರ ತಾಳ್ಮೆ ಕಳೆದುಕೊಂಡ ಫಿರ್ದೌಸ್, ಸಂಸದನ ಕೆನ್ನೆಗೆ ಬಾರಿಸಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಈ ಬಗ್ಗೆ ಮಾತನಾಡಿರುವ ನಾಯಕಿ ಫಿರ್ದೌಸ್, "ಟಾಕ್ ಶೋ ಸಂದರ್ಭದಲ್ಲಿ ಪಿಪಿಪಿಯ ಖಾದಿರ್ ಮಂಡೋಖೆಲ್ ನನ್ನ ವಿರುದ್ಧ ಬೆದರಿಕೆ ಹಾಕಿದ್ದಾರೆ. ಅವರು ನನ್ನ ದಿವಂಗತ ತಂದೆಯನ್ನು ಮತ್ತು ನನ್ನನ್ನು ನಿಂದಿಸುವ ಭಾಷೆ ಬಳಸಿ ಅವಮಾನಿಸಿದ್ದಾರೆ. ನನ್ನ ರಕ್ಷಣೆಯಲ್ಲಿ ನಾನು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು. ಕಾನೂನು ತಂಡದೊಂದಿಗೆ ಸಮಾಲೋಚಿಸಿದ ನಂತರ ಖಾದಿರ್ ಮಂಡೋಖೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು." ಎಂದು ಹೇಳಿದ್ದಾರೆ. (ಏಜೆನ್ಸೀಸ್)