

ಬೆಂಗಳೂರು: ಕಿಚ್ಚ ಸುದೀಪ್ ಅನೇಕ ಚಿತ್ರಗಳಲ್ಲಿ ನಟಿಸಿದ್ದು ಅಪಾರ ಅಭಿಮಾನಿ ಬಳಗವನ್ನು ದೇಶಾದ್ಯಂತ ಹೊಂದಿದ್ದಾರೆ. ಅವರು ಕನ್ನಡವಲ್ಲದೇ ತೆಲುಗು, ಹಿಂದಿ ಸೇರಿದಂತೆ ನಾನಾ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದು ಬಾಲಿವುಡ್ನ ಸಲ್ಮಾನ್ ಖಾನ್ ಜತೆಗೂ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಸ್ಟಾರ್ ನಟರ ಚಿತ್ರವನ್ನು ಹಚ್ಚೆ ಹಾಕಿಸಿಕೊಳ್ಳುವವರಿಂದ ಹಿಡಿದು, ತಮ್ಮ ರಕ್ತದಲ್ಲೇ ಚಿತ್ರ ಬಿಡಿಸುವವರವರೆಗೆ ನಾನಾ ರೀತಿಯ ಅಭಿಮಾನಿಗಳು ಇರುತ್ತಾರೆ. ಇದೀಗ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ತಮ್ಮದೇ ರಕ್ತದಲ್ಲಿ ಕಿಚ್ಚ ಸುದೀಪ್ ಚಿತ್ರವನ್ನು ಬಿಡಿಸಿ ಸಂಚಲನ್ನು ಮೂಡಿಸುತ್ತಿದ್ದಾರೆ.
ಶಿವಮೊಗ್ಗ ಮೂಲದ ವೈಷ್ಣವಿ ದೀಪು ಸಸ್ಯಾಹಾರಿ ಎನ್ನಲಾಗುತ್ತಿದ್ದು ಈ ಬಗ್ಗೆ ಸುದೀಪ್ ಅಭಿಮಾನಿ ಬಳಗವೊಂದು "ರಕ್ತ ಮೊಟ್ಟೆ ಮಾಂಸವನ್ನು ನೋಡದೆ ಇರುವ ಇವರು ತಮ್ಮದೇ ರಕ್ತದಲ್ಲಿ ಚಿತ್ರ ಬಿಡಿಸಿದ್ದು ನಿಜಕ್ಕೂ ಗ್ರೇಟ್" ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತಾಗಿ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಕೈ ಮುಗಿಯುವ ಇಮೋಜಿಗಳನ್ನು ಬಳಸಿ ಕಾಮೆಂಟ್ ಮಾಡಿದ್ದರೆ, ಕೆಲವರು ಹಾಗೆಲ್ಲ ರಕ್ತವನ್ನು ವ್ಯರ್ಥ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.