ಕಾರಿನ ಕೆಳಗೆ ಸಿಲುಕಿದ್ದ ಮಹಿಳೆಯನ್ನು 20 ಕಿಲೋಮೀಟರ್​ ದೂರ ಎಳೆದುಕೊಂಡು ಹೋದ ಕಿರಾತಕರು…

accident
Published on

ನವದೆಹಲಿ: ಈ ಯುವತಿ ತನ್ನ ತಾಯಿಗೆ ರಾತ್ರಿ 10 ಗಂಟೆಗೆ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಾಳೆ. ಆದರೆ ಆಕೆಯ ದುರದೃಷ್ಟಕ್ಕೆ, ಆಕೆ ಅಪಘಾತದಲ್ಲಿ ಕಾರಿನ ಅಡಿ ಸಿಕ್ಕಿ ಹಾಕಿಕೊಂಡಿದ್ದಾಳೆ. ನಂತರ ಅನೇಕ ಕಿಮೀಗಳವರೆಗೆ ಕಾರು ಈಕೆಯನ್ನು ಎಳೆದುಕೊಂಡು ಹೋಗಿದೆ.

ದೆಹಲಿಯ ಕಂಝವಾಲಾ ಪ್ರದೇಶದಲ್ಲಿ 20 ವರ್ಷದ ಯುವತಿಯೊಬ್ಬರು ಸುಲ್ತಾನ್‌ಪುರಿಯಿಂದ ವೇಗವಾಗಿ ಬರುತ್ತಿದ್ದ ಕಾರಿನ ಕೆಳಗೆ ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದು ಒಯ್ಯಲ್ಪಟ್ಟು ಸಾವಿಗೀಡಾಗಿದ್ದಾರೆ. ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ನಗ್ನ ಸ್ಥಿತಿಯಲ್ಲಿದ್ದ ಮಹಿಳೆಯ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ತಾಯಿ, ಆಕೆಯ ಮಗಳ ಮೃತದೇಹವನ್ನು ಇನ್ನೂ ನೋಡಿಲ್ಲ.

ದುಃಖ ಮತ್ತು ಸಂಕಟದಲ್ಲಿ, ಯುವತಿಯ ತಾಯಿ “ನನ್ನ ಮಗಳೇ ನನ್ನ ಸರ್ವಸ್ವ. ಅವಳು ನಿನ್ನೆ ಕೆಲಸಕ್ಕೆ ಹೋಗಿದ್ದಳು. ಸಂಜೆ 5:30 ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಾಳೆ. ಹೋಗುವಾಗ ರಾತ್ರಿ 10 ಗಂಟೆಗೆ ಹಿಂತಿರುಗುವುದಾಗಿ ಹೇಳಿದ್ದಳು. ಅವಳ ಅಪಘಾತದ ಬಗ್ಗೆ ನನಗೆ ಬೆಳಿಗ್ಗೆ ತಿಳಿಸಿದ್ದಾರೆ. ಆದರೆ ನಾನು ಅವಳ ದೇಹವನ್ನು ಇದುವರೆಗೆ ನೋಡಿಲ್ಲ" ಎಂದು ತಾಯಿ ಹೇಳಿದರು. ಕುಟುಂಬದ ಹಿರಿಯ ಮಗು, ತನ್ನ ತಾಯಿ, ನಾಲ್ವರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ. ಆಕೆಯ ತಂದೆ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು.

ಮಹಿಳೆಯ ಸ್ಕೂಟಿಗೆ ಡಿಕ್ಕಿ ಹೊಡೆದ ಬಲೆನೊ ಕಾರಿನಲ್ಲಿದ್ದ ಐವರು ಪ್ರಯಾಣಿಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ ಆಗಿದ್ದೇನೆಂದರೆ ಕುಡಿದ ಅಮಲಿನಲ್ಲಿದ್ದ ಐವರ ಕಾರು ಮಹಿಳೆಯ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಆಕೆಯ ಬಟ್ಟೆ ಕಾರಿನ ಕೆಳಭಾಗಕ್ಕೆ ಸಿಕ್ಕಿಹಾಕಿಕೊಂಡಿದೆ. ಅರಿವಿದ್ದೋ ಅರಿವಿಲ್ಲದೆಯೋ, ಅವರು ಕಾರಿನ ಕೆಳಗೆ ಸಿಲುಕಿದ್ದ ಯುವತಿಯನ್ನು ಬರೋಬ್ಬರಿ 18ರಿಂದ 20ಕಿಮೀ ದೂರದವರೆಗೆ ಎಳೆದುಕೊಂಡು ಹೋಗಿದ್ದಾರೆ.

ಕಾರಿನೊಂದಿಗೆ ಶವ ಸಿಲುಕಿಕೊಂಡು ಹೋಗುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ, ಮಹಿಳೆಯ ಬೆತ್ತಲೆ ದೇಹವು ರಸ್ತೆಯ ಮಧ್ಯದಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮತ್ತೊಂದು ಪಿಸಿಆರ್ ಕರೆ ಬಂದಿದೆ. ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಅಪಘಾತದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ತಮ್ಮ ಕಾರು ಮಹಿಳೆಯನ್ನು ಎಳೆದುಕೊಂಡು ಹೋಗುತ್ತಿದೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.ನ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net