

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನನ್ನು ಆಸ್ಪತ್ರೆಗೆ ಕರೆತಂದ ಮಗ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗದೆ, ಆಕೆ ಆಟೋದಲ್ಲಿ ಕುಳಿತು ಪ್ರಾಣ ಬಿಡುವುದನ್ನು ನೋಡುತ್ತ ಅಸಹಾಯಕನಾಗಿ ನಿಂತಿದ್ದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
28 ವರ್ಷದ ಮುಕುಲ್ ವ್ಯಾಸ್ ತನ್ನ ತಾಯಿ ಕಿರಣ ವ್ಯಾಸ (52) ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದರು. ಸರ್ದಾರ್ ವಲ್ಲಭ ಭಾಯಿ ಪಟೇಲ್ ಆಸ್ಪತ್ರೆಗೆ ಸೇರಿಸಲೆಂದು ಕರೆತರಲಾಗಿತ್ತು. ಆದರೆ ಆಸ್ಪತ್ರೆಯವರು ರೋಗಿಯನ್ನು ದಾಖಲಿಸಿಕೊಳ್ಳುವ ಮೊದಲು ಅನೇಕ ಕ್ರಮಗಳನ್ನು ಅನುಸರಿಸುವಂತೆ ಹೇಳಿದ್ದಾರೆ. ಜಿಲ್ಲಾ ಕಣ್ಗಾವಲು ಅಧಿಕಾರಿಯಿಂದ ರೆಫರೆನ್ಸ್ ಪತ್ರ ತರಬೇಕು ಎಂದಿದ್ದಾರೆ. ನಿಮಗೆ ಮೆಸೇಜ್ ಬರುತ್ತೆ ಅದನ್ನ ಕೊಡಬೇಕು.. ಹೀಗೆ ನಾನಾ ರೀತಿಯ ನಿಯಮಗಳನ್ನು ಹೇಳಿದ್ದಾರೆ. ಗಂಟೆಗಟ್ಟಲೆ ಆ ಕೆಲಸದಲ್ಲೇ ಮುಕುಲ್ ಕಾಲ ಕಳೆದಿದ್ದಾನೆ.
ಇತ್ತ ಆಟೋದಲ್ಲಿದ್ದ ಕಿರಣಗೆ ಉಸಿರಾಟ ತೊಂದರೆ ತೀವ್ರವಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಅದಾದ ನಂತರ ಮುಕುಲ್ ತನ್ನ ತಾಯಿಯ ಸಾವಿಗೆ ಆಸ್ಪತ್ರೆಯವರೇ ಕಾರಣ ಎಂದು ಆರೋಪಿಸಿದ್ದಾನೆ. ಯಾರಾದರೂ ಒಬ್ಬರು ಸಾಯುತ್ತಿದ್ದರೆ ಅವರಿಗೆ ಚಿಕಿತ್ಸೆ ಕೊಡುವುದು ಮುಖ್ಯವೋ ಅಥವಾ ಅವರ ನಿಯಮ ಪಾಲನೆ ಮಾಡುವುದು ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ. ವೈದ್ಯಕೀಯ ಅವ್ಯವಸ್ಥೆಗೆ ಇದೊಂದು ನಿದರ್ಶನವಾಗಿದೆ. (ಏಜೆನ್ಸೀಸ್)