ಮಗುವಿಗಾಗಿ ಮೊಬೈಲ್​ ಟವರ್ ಮೇಲಿಂದ ಹಾರಿದ ಮಹಿಳೆಯ ಪ್ರಾಣ ಉಳಿಸಲು ಪೊಲೀಸರು ಮಾಡಿದ್ದೇನು?

Mobile Tower
Published on

ಅಲಫುಝ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಮಹಿಳೆಯೊಬ್ಬಳು ಬಿಎಸ್​ಎನ್​ಎಲ್​ ಟವರ್ ಏರಿದ ಘಟನೆ ನೆರೆ ರಾಜ್ಯ ಕೇರಳದಲ್ಲಿ ನಡೆದಿದೆ.

ಅಲಫುಝ ಜಿಲ್ಲೆಯ ಕಯಮಕುಲಮ್​ನಲ್ಲಿ ಮೊಬೈಲ್​ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಪೊಲೀಸರು ಓಡೋಡಿ ಬಂದಿದ್ದಾರೆ.

ಟವರ್​ ಮೇಲೇರಿರುವ ಮಹಿಳೆಯನ್ನು ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. ಮಹಿಳೆ ಮಾತ್ರ ಇಳಿಯದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಈಕೆ ಟವರ್​ ಏರಲು ಕಾರಣ ಇಷ್ಟೇ... ಮಗುವನ್ನು ತನ್ನ ಪತಿ ಕರೆದುಕೊಂಡು ಹೋಗಿದ್ದು, ವಾಪಸ್​ ಕೊಡದಿದ್ದರೆ ತಾನು ಪ್ರಾಣ ಬಿಡುವುದಾಗಿ ಹೇಳಿದ್ದಾಳೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಲು ಟವರ್​ ಏರಿದ್ದಾಳೆ.

ಪೊಲೀಸರು ಎಷ್ಟೇ ಹೇಳಿದರೂ ಬಗ್ಗದ ಮಹಿಳೆಯ ವರ್ತನೆಯಿಂದ ಬೇಸತ್ತು ಕೊನೆಗೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿದ್ದಾರೆ. ಆಕೆ ಹಾರಿದೂ ಪ್ರಾಣಕ್ಕೇನೂ ಆಗಬಾರದೆಂದು ಸುತ್ತಲೂ ದೊಡ್ಡ ಬಲೆಯನ್ನು ಹಾಕಿದ್ದರು. ಇದೇ ವೇಳೆ ಮಹಿಳೆ ಜಿಗಿದಿದ್ದಾಳೆ. ಈಕೆ ತಮಿಳುನಾಡು ಮೂಲದವಳಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಮಗುವನ್ನು ಕೊಡಿಸುವ ವಿಚಾರವಾಗಿ ಆಕೆಯ ಪತಿ ಜತೆ ಮಾತನಾಡುವುದಾಗಿಯೂ ಪೊಲೀಸರು ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net