

ನವದೆಹಲಿ: ಫೆ.14ರ ಪ್ರೇಮಿಗಳ ದಿನವನ್ನು ಅನೇಕ ಪ್ರೇಮ ಪಕ್ಷಿಗಳು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಪರಸ್ಪರ ಉಡುಗೊರೆ ವಿನಿಮಯ ಹಾಗೂ ಡೇಟಿಂಗ್, ಮೀಟಿಂಗ್ ಅಂತಾ ಇಡೀ ದಿನವನ್ನು ಎಂಜಾಯ್ ಮಾಡಿದ್ದಾರೆ. ಕೆಲವರು ಪಾಲಕರ ಕಣ್ತಪ್ಪಿಸಿ ಕದ್ದುಮುಚ್ಚಿ ತಮ್ಮ ಬಾಯ್ಫ್ರೆಂಡ್ ಅಥವಾ ಗರ್ಲ್ಫ್ರೆಂಡ್ ಭೇಟಿಯಾಗಿದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಯುವತಿಯೊಬ್ಬಳು ಪ್ರೇಮಿಗಳ ದಿನದಂದು ತನ್ನ ಬಾಯ್ಫ್ರೆಂಡ್ ಜೊತೆ ಇರುವಾಗ ತಾಯಿಯ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪ್ರೇಮಿಗಳು ದಿನ ಎಲ್ಲರಿಗೂ ಒಂದೇ ರೀತಿ ಇರಲ್ಲ. ಕೆಲವರಿಗೆ ಪ್ರೇಮಿಗಳ ದಿನವೂ ಕೂಡ ಕಹಿ ದಿನವಾಗಿ ತಿರುವು ಪಡೆದುಕೊಳ್ಳುತ್ತದೆ ಎಂಬುದಕ್ಕೆ ಈ ವಿಡಿಯೋನೆ ಸಾಕ್ಷಿ. ಬಾಯ್ಫ್ರೆಂಡ್ ಜೊತೆ ಯುವತಿಯೊಬ್ಬಳು ರೆಸ್ಟೋರೆಂಟ್ನಲ್ಲಿ ಇರುವಾಗ ತಾಯಿಯ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಮಗಳನ್ನು ಯುವಕನೊಂದಿಗೆ ನೋಡಿದ ತಾಯಿ ಕೋಪದಿಂದ ಕಾಲಲ್ಲಿದ್ದ ಚಪ್ಪಲಿಯನ್ನು ಕಳೆದುಕೊಂಡು ಯುವಕನಿಗೆ ಹಿಗ್ಗಾಮುಗ್ಗಾ ಬಾರಿಸುತ್ತಾಳೆ. ಈ ವೇಳೆ ಡೈನಿಂಗ್ ಟೇಬಲ್ನ ಕುರ್ಚಿಯಲ್ಲಿ ಬಾಯ್ಫ್ರೆಂಡ್ ಎದುರಿಗೆ ಕುಳಿತಿದ್ದ ಯುವತಿ ಎದ್ದು ತನ್ನ ತಾಯಿಯನ್ನು ತಡೆಯಲು ಯತ್ನಿಸುತ್ತಾಳೆ. ಆದರೆ, ಸುಮ್ಮನಾಗದ ತಾಯಿ ಮಗಳಿಗೂ ಚಪ್ಪಲಿ ಸೇವೆಯನ್ನು ಮಾಡಿರುವುದು ವಿಡಿಯೋದಲ್ಲಿದೆ.
ತನ್ನ ಗರ್ಲ್ಫ್ರೆಂಡ್ಗೆ ಹೊಡೆಯಬೇಡಿ ಎಂದು ಯುವಕ ಆಕೆಯ ತಾಯಿಯನ್ನು ಕೇಳಿಕೊಳ್ಳುತ್ತಾನೆ. ಆದರೆ, ಯಾರ ಮಾತನ್ನು ಕೇಳುವ ವ್ಯವಧಾನ ಇರದ ಮಹಿಳೆ ಮನಸೋ ಇಚ್ಛೆ ಇಬ್ಬರಿಗೂ ಥಳಿಸುತ್ತಾಳೆ.
ವಿಡಿಯೋವನ್ನು ಘರ್ ಕೆ ಕಲೇಶ್ ಹೆಸರಿನ ಟ್ವಿಟರ್ ಬಳಕೆದಾರ ಶೇರ್ ಮಾಡಿಕೊಂಡಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಹರಿಬಿಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)