

ಕುಂದಾಪುರ: ಜೀವನದಲ್ಲಿ ಸೋಲು-ಗೆಲುವು ಎರಡೂ ಇರುತ್ತದೆ. ಸೋಲು ಅರಗಿಸಿಕೊಳ್ಳಲು ಆಗದಿದ್ದರೆ ಗೆಲುವು ಅನುಭವಿಸಲು ಆಗುವುದಿಲ್ಲ. ಸೋಲು ಗೆಲುವಿನ ಆರಂಭವಾಗಬೇಕು ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ನಾಯ್ಕ ಹೇಳಿದರು.
ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಲದ 60ನೇ ವರ್ಷದ ಗಣೇಶೋತ್ಸವ ಸಮಾರಂಭದ ಪ್ರಯುಕ್ತ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉದ್ಯಮಿ ಏಕನಾಥ್ ಬೋಳಾರ್ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು. ಪೂರ್ವಿ ಮತ್ತು ತಂಡ ಕ್ರೀಡಾ ಜ್ಯೋತಿಯನ್ನು ನಗರದ ರಾಮ ಮಂದಿರದಿಂದ ಜೂನಿಯರ್ ಕಾಲೇಜು ಮೈದಾನಕ್ಕೆ ತಂದು ಹಸ್ತಾಂತರಿಸುವ ಮೂಲಕ ಕ್ರೀಡೆಗಳಿಗೆ ಚಾಲನೆ ನೀಡಲಾಯಿತು.
ರಾಮಕ್ಷತ್ರಿಯರ ಸಂಘ ಅಧ್ಯಕ್ಷ ಲಕ್ಷ್ಮೀಶ ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಲ್‌ಐಸಿ ಅಧಿಕಾರಿ ಎಸ್.ಮಂಜುನಾಥ್ ನಾಯಕ್, ರಾಮಕ್ಷತ್ರಿಯ ಯುವಕ ಮಂಡಳಿ ಅಧ್ಯಕ್ಷ ರಾಜೇಶ್ ರಾವ್, ಕಾರ್ಯದರ್ಶಿ ಯು.ಕೆ.ಅನಿಲ್ ಕುಮಾರ್, ಗೌರವಾಧ್ಯಕ್ಷ ಪ್ರಭಾಕರ್ ಎನ್., ನಿಯೋಜಿತ ಅಧ್ಯಕ್ಷ ನಾಗರಾಜ್ ದಪೇದಾರ್, ಮಹಿಳಾ ಮಂಡಳಿ ಅಧ್ಯಕ್ಷೆ ಸುಮತಿ ಪ್ರಕಾಶ್ ರಾವ್, ಕ್ರೀಡಾ ಕಾರ್ಯದರ್ಶಿ ರಾಮು ಹೆಗ್ಡೆ, ಖಜಾಂಚಿ ಸುರೇಶ್ ಕೆಳಮನೆ ಉಪಸ್ಥಿತರಿದ್ದರು. ಅಧ್ಯಕ್ಷ ರಾಜೇಶ್ ಪಡುಕೆರೆ ಸ್ವಾಗತಿಸಿದರು. ಮಧುಕರ್ ಕೆ. ಕಾರ್ಯಕ್ರಮ ನಿರೂಪಿಸಿದರು. ರಾಮು ಹೆಗ್ಡೆ ವಂದಿಸಿದರು.