ಹಸಿರು ವಲಯವಾಗಿ ಉಳಿದಿರುವ ಕೋಲಾರದಲ್ಲಿ 124 ಮದ್ಯದಂಗಡಿ ಓಪನ್

3-klr-4
Published on

ಕೋಲಾರ: ಜಿಲ್ಲೆಯ ಮದ್ಯಪ್ರಿಯರಿಗೆ ಶುಭ ಸುದ್ದಿ, ಲಾಕ್‌ಡೌನ್ ಆದಾಗಿನಿಂದ ಮುಚ್ಚಿದ್ದ ಮದ್ಯದಂಗಡಿಗಳ ಪೈಕಿ 124 ಮದ್ಯದಂಗಡಿಗಳು ಸೋಮವಾರದಿಂದ ಓಪನ್ ಆಗಲಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ನೆರೆಯ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸೋಂಕು ಪ್ರಕರಣ ಹೆಚ್ಚಾಗಿ ಕಾಣಿಸಿಕೊಂಡು ಕೆಂಪು ವಲಯವಾಗಿ ಗುರುತಿಸಿರುವ ನಡುವೆ ಹಸಿರು ವಲಯವಾಗಿ ಉಳಿದಿರುವ ಕೋಲಾರ ಜಿಲ್ಲೆಯಲ್ಲೂ ಮದ್ಯದಂಗಡಿ ತೆರೆಯಲು ಗ್ರೀನ್‌ಸಿಗ್ನಲ್ ದೊರಕಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸಿಎಲ್-2 (ಸನ್ನದು) 103 ಮದ್ಯದಂಗಡಿ, ಸಿಎಲ್-11ಸಿ (ಎಂಎಸ್‌ಐಎಲ್)21, ಸಿಎಲ್-9 (ಬಾರ್ ಆ್ಯಂಡ್ ರೆಸ್ಟೋರೆಂಟ್) ಮತ್ತು ಸಿಎಲ್-7 (ಬೋರ್ಡಿಂಗ್ ಅಂಡ್ ಲಾಡ್ಜಿಂಗ್) 116 ಸೇರಿ ಒಟ್ಟು 240 ಮದ್ಯದಂಗಡಿಗಳಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಸಿಎಲ್ 2 ಮತ್ತು ಎಂಎಸ್‌ಐಎಲ್‌ನ ಒಟ್ಟು 124 ಮದ್ಯದಂಗಡಿಗಳನ್ನು ಓಪನ್ ಮಾಡಲು ಅವಕಾಶವಿದೆ. ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದ್ದೇ ತಡ, ಎಂಎಸ್‌ಐಎಲ್ ಮತ್ತು ಸಿಎಲ್ 2 ಮಳಿಗೆಗಳು ಮದ್ಯ ಮಾರಾಟ ಮಾಡಲು ಭಾನುವಾರವೇ ಸಿದ್ಧಗೊಂಡಿವೆ. ಜನಜಂಗುಳಿ ನಿಯಂತ್ರಿಸಲು ಹಾಗೂ ಮಳಿಗೆಯಲ್ಲಿ 5 ಗ್ರಾಹಕರು ಇರುವಂತೆ ಮತ್ತು ಸಾಮಾಜಿಕ ಅಂತರ 6 ಅಡಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳಲು ಬ್ಯಾರಿಕೇಡ್, ತಡೆಬೇಲಿ ಹಾಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ಗುರುತು ಮಾಡಿದ್ದಾರೆ. ಕೆಲವು ಮಳಿಗೆ ಮುಂದೆ 6 ಅಡಿ ಅಂತರ ಮಾತ್ರ ಕಾಣುತ್ತಿಲ್ಲ.

ಮದ್ಯ ಮಾರಾಟ ಮಾಡುವ ಸನ್ನದಿನ ನೌಕರರು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸನ್ನದು ಸ್ಥಳಗಳಲ್ಲಿ ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಗಿದೆ.

ಪರಿಶೀಲನೆ: ಮದ್ಯದಂಗಡಿ ತೆರೆಯುವ ಸಂಬಂಧ ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುಮಿತಾ ನೇತೃತ್ವದಲ್ಲಿ ಅಧಿಕಾರಿಗಳು ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿ ಕ್ರಮಗಳ ಕುರಿತು ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿ ಸಿಎಲ್-2, ಎಂಎಸ್‌ಐಎಲ್ ಸೇರಿ ಒಟ್ಟು 124 ಮದ್ಯದಂಗಡಿಗಳು ಸೋಮವಾರದಿಂದ ತೆರೆಯಲಿವೆ. ಸರ್ಕಾರದ ಆದೇಶ ಉಲ್ಲಂಘಿಸುವ ಸನ್ನದುಗಳ ಅಮಾನತು ರದ್ದುಪಡಿಸಲಾಗುವುದು. ಗ್ರಾಹಕರೂ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆ.ಕೆ.ಸುಮಿತಾ, ಅಬಕಾರಿ ಉಪ ಆಯುಕ್ತೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net