ಮೊದಲು ರಾಯ್ ​ಬರೇಲಿ ಗೆಲ್ಲಿ ಆಮೇಲೆ… ನೆಚ್ಚಿನ ಚೆಸ್ ದಂತಕತೆಯಿಂದಲೇ ರಾಹುಲ್​ಗೆ ಮುಖಭಂಗ!

Rahul Gandhi
Published on

ನವದೆಹಲಿ: ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಅವರನ್ನು ಉದ್ದೇಶಿಸಿ ಮಾಜಿ ವಿಶ್ವ ಚೆಸ್ ಚಾಂಪಿಯನ್​ ಗ್ಯಾರಿ ಕಾಸ್ಪರೋವ್ ಮಾಡಿರುವ ಟ್ವೀಟ್​ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಸ್ಪರೋವ್​ ನನ್ನ ನೆಚ್ಚಿನ ಚೆಸ್​ ಆಟಗಾರ ಎಂದು ರಾಗಾ ಹಿಂದೊಮ್ಮೆ ಹೇಳಿದ್ದರು ಇದೀಗ ಅವರಿಂದಲೇ ಟೀಕೆಗೆ ಗುರಿಯಾಗಿರುವುದು ವಯನಾಡು ಸಂಸದನಿಗೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾದಂತಾಗಿದೆ.

ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 2005ರಲ್ಲಿ ಚೆಸ್​ನಿಂದ ನಿವೃತ್ತರಾದರು. ಶುಕ್ರವಾರ ಎಕ್ಸ್​ (ಈ ಹಿಂದೆ ಟ್ವಿಟರ್​) ಬಳಕೆದಾರರೊಬ್ಬರು ಮಾಡಿದ್ದ ಪೋಸ್ಟ್​ಗೆ ಪ್ರತಿಕ್ರಿಯೆ ನೀಡುವಾಗ ರಾಹುಲ್​ ಗಾಂಧಿಗೆ ಟಾಂಗ್​ ಕೊಟ್ಟಿದ್ದಾರೆ. ಅಷ್ಟಕ್ಕೂ ಕಾಸ್ಟರೋವ್​ ಹೇಳಿದ್ದೇನು ಎಂಬುದನ್ನು ತಿಳಿಯುವ ಮೊದಲು ಎಕ್ಸ್​ ಬಳಕೆದಾರ ಏನು ಪೋಸ್ಟ್​ ಮಾಡಿದ್ದರು ಎಂಬುದನ್ನು ತಿಳಿಯೋಣ.

ಸಂದೀಪ್​ ಘೋಸ್​ ಹೆಸರಿನ ಎಕ್ಸ್​ ಬಳಕೆದಾರ, ಕಾಸ್ಪರೋವ್ ಮತ್ತು ವಿಶ್ವನಾಥ್​ ಆನಂದ್​ ಅವರು ಮುಂಚೆಯೇ ನಿವೃತ್ತರಾಗಿದ್ದು ಸಮಾಧಾನ ಎನಿಸುತ್ತಿದೆ. ಏಕೆಂದರೆ, ನಮ್ಮ ಕಾಲದ ಶ್ರೇಷ್ಠ ಚೆಸ್ ಪ್ರತಿಭೆಯನ್ನು ಅವರು ಎದುರಿಸಬೇಕಾಗಿಲ್ಲ ಎಂದು ಹೇಳಿದ್ದರು. ಸಂದೀಪ್​ ಪ್ರಕಾರ ಆ ಶ್ರೇಷ್ಠ ಚೆಸ್​ ಪ್ರತಿಭೆ ಬೇರೆ ಯಾರೂ ಅಲ್ಲ ರಾಹುಲ್​ ಗಾಂಧಿ. ಸಂದೀಪ್​ ಹೀಗೆ ಹೇಳಲು ಕಾರಣವಿದೆ. ಅದೇನೆಂದರೆ, ಹಿಂದೊಮ್ಮೆ ಸಂದರ್ಶನವೊಂದರಲ್ಲಿ ರಾಹುಲ್​ ಗಾಂಧಿ, ರಾಜಕಾರಣಿಗಳ ನಡುವೆ ನಾನೊಬ್ಬ ಶೇಷ್ಠ ಚೆಸ್​ ಆಟಗಾರನೆಂದು ಹೇಳಿಕೊಂಡಿದ್ದರು. ಇದನ್ನೆ ಉಲ್ಲೇಖಿಸಿ, ಕಾಸ್ಪರೋವ್​ ಮತ್ತು ವಿಶ್ವನಾಥ್​ ಆನಂದ್​ ಅವರನ್ನು ಟ್ಯಾಗ್​ ಮಾಡಿ ಸಂದೀಪ್​ ಪೋಸ್ಟ್​ ಮಾಡಿದ್ದಾರೆ.

ಈ ಪೋಸ್ಟ್​ಗೆ ಕಾಸ್ಟರೋವ್​ ನೀಡಿರುವ ಪ್ರತಿಕ್ರಿಯೆ ರಾಹುಲ್​ ಗಾಂಧಿಗೆ ಟಾಂಗ್​ ನೀಡಿದಂತಿದೆ. ಅಷ್ಟಕ್ಕೂ ಕಾಸ್ಟರೋವ್​ ಹೇಳಿದ್ದೇನೆಂದರೆ, ಅಗ್ರಸ್ಥಾನಕ್ಕಾಗಿ ಸವಾಲು ಎಸೆಯುವ ಮೊದಲು ನೀವು ರಾಯ್​​ಬರೇಲಿಯಿಂದ ಗೆಲ್ಲಬೇಕು ಎಂದಿದ್ದಾರೆ. ಇಲ್ಲಿ ಕಾಸ್ಪರೋವ್​ ರಾಹುಲ್​ ಗಾಂಧಿ ಹೆಸರೇಳದಿದ್ದರೂ ಈ ಪೋಸ್ಟ್​ ರಾಹುಲ್​ಗೆ ಸಂಬಂಧಿಸಿದೆ ಎನ್ನುವುದಕ್ಕೆ ಸ್ಪಷ್ಟ ಸುಳಿವು ಇದೆ. ಅದೇನೆಂದರೆ, ರಾಹುಲ್​ ಗಾಂಧಿ ಅವರು ಕೇರಳದ ವಯನಾಡು ಮಾತ್ರವಲ್ಲದೆ, ಉತ್ತರ ಪ್ರದೇಶದ ರಾಯ್​ ಬರೇಲಿಯಿಂದಲೂ ಲೋಕಸಭಾ ಚುನಾವಣ ಕಣಕ್ಕೆ ಇಳಿದಿದ್ದಾರೆ. 2019ರಲ್ಲಿ ಅಮೇಠಿಯಿಂದ ಸ್ಪರ್ಧಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯಿಂದ ಸೋಲನ್ನು ಅನುಭವಿಸಿದ ರಾಹುಲ್​, ಇದೀಗ ಮತ್ತೆ ಸೋಲುವ ಭೀತಿಯಿಂದ ಅಮೇಠಿಯಿಂದ ರಾಯ್​ಬರೇಲಿಗೆ ಸ್ಥಳಾಂತರವಾಗಿದ್ದಾರೆ. ಈ ರಾಯ್​ಬರೇಲಿ ಕ್ಷೇತ್ರವನ್ನು ಈ ಮೊದಲು ತಮ್ಮ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದರು.

ನಿನ್ನೆಯಷ್ಟೇ ರಾಹುಲ್​ ರಾಯ್​ಬರೇಲಿಯಿಂದ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದರ ನಡುವೆ ಎಕ್ಸ್​ ವೇದಿಕೆಯಲ್ಲಿ ಸಂದೀಪ್​ ಮತ್ತು ಕಾಸ್ಪರೋವ್​ ನಡುವೆ ಇಂಟೆರೆಸ್ಟಿಂಗ್​ ಪೋಸ್ಟ್​ಗಳು ಬಂದಿವೆ. ಮತ್ತೊಂದು ಪೋಸ್ಟ್​ ಮಾಡಿರುವ ಕಾಸ್ಪರೋವ್​, ನಾನು ಮಾಡಿದ ಒಂದು ಪುಟ್ಟ ತಮಾಷೆಯನ್ನು ಭಾರತೀಯ ರಾಜಕೀಯದಲ್ಲಿ ಸಮರ್ಥನೆಗಾಗಿ ಅಥವಾ ತಜ್ಞರ ಅಭಿಪ್ರಾಯವೆಂದು ಪರಿಗಣಿಸುವುದಿಲ್ಲ ಅಂತ ನಾನು ಭಾವಿಸುತ್ತೇನೆ. ಆದರೂ ರಾಜಕಾರಣಿಯೊಬ್ಬರು ನನ್ನ ಪ್ರೀತಿಯ ಆಟದಲ್ಲಿ ತೊಡಗುವುದನ್ನು ನೋಡಲು ನಾನು ವಿಫಲನಾಗುವುದಿಲ್ಲ ಎಂದಿದ್ದಾರೆ.

ಕಾಸ್ಪರೋವ್​ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಸಂದೀಪ್​, ನಾನಿದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಒಂದು ಜೋಕ್ ಜೋಕ್ ಆಗಿಯೇ ಉಳಿಯಬೇಕು (ನಿಜಕ್ಕೂ ಜೋಕರ್ ಯಾವಾಗಲೂ ಜೋಕರ್ ಆಗಿರುತ್ತಾನೆ). Twitter ಅಥವಾ X ಮೋಜಿನ ಸ್ಥಳವಾಗಿದೆ ಎಂಬುದನ್ನು ಎಲಾನ್​ ಮಸ್ಕ್​ಗಿಂತ ಯಾರು ಚೆನ್ನಾಗಿ ಬಲ್ಲರು ಎನ್ನುವ ಮೂಲಕ ಟ್ವೀಟ್​ ಸಂಭಾಷಣೆ ಮುಕ್ತಾಯವಾಗಿದೆ.

ಇದೀಗ ಇದೇ ಟ್ವೀಟ್​ ಇಟ್ಟುಕೊಂಡು ರಾಹುಲ್​ ಗಾಂಧಿ ಅವರ ಕಾಲೆಳೆಯಲಾಗುತ್ತಿದೆ. ರಾಹುಲ್​ಗೆ ಜಾಗತಿಕ ಮಟ್ಟದಲ್ಲಿ ಭಾರಿ ಮುಖಭಂಗ ಎಂದು ಬಿಂಬಿಸಲಾಗುತ್ತಿದೆ. ಅಂದಹಾಗೆ ಕಾಸ್ಪರೋವ್​ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಯಾವಾಗಲು ಟೀಕಿಸುತ್ತಿರುತ್ತಾರೆ. ಅಲ್ಲದೆ, ಅವರು ದೇಶದಿಂದ ಪಲಾಯನ ಮಾಡಿ, ಕ್ರೊಯೇಷಿಯಾದಲ್ಲಿ ನೆಲೆಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net