2ನೇ ತರಗತಿಯ ವರ್ಷಾ ಪ್ರತಿಭೆ ಕೇಳಿದರೆ ಬೆರಗಾಗ್ತೀರಾ....!

Varsha 2nd std Student
Published on

ಇಂದುಧರ ಹಳಕಟ್ಟಿ ಹಿರೇಕೆರೂರ

ದೇಶದ ಪ್ರಧಾನಿಗಳು, ರಾಜ್ಯಗಳ ಮುಖ್ಯಮಂತ್ರಿ, ರಾಜ್ಯಗಳು, ರಾಜಧಾನಿಗಳು, ನದಿಗಳ ಹೆಸರು ಸೇರಿದಂತೆ ಯಾವುದೇ ಪ್ರಶ್ನೆ ಕೇಳಿದರೂ ಥಟ್ಟನೆ ಉತ್ತರಿಸುವ ವಿದ್ಯಾರ್ಥಿನಿ ವರ್ಷಾ, ತನ್ನ ಅದ್ಭುತ ಸ್ಮರಣ ಶಕ್ತಿ ಮೂಲಕ ಎಂತಹವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತಾಳೆ.

ಪಟ್ಟಣದ ದುರ್ಗಾ ನಗರದ ಬಡ ಕುಟುಂಬದ ಈರಣ್ಣ ಚನ್ನಬಸನಗೌಡ್ರ ರಾಯನಗೌಡ್ರ ಅವರ ಪುತ್ರಿಯಾಗಿರುವ ವರ್ಷಾ, ಸರ್ಕಾರಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭೆ. ತಂದೆ ಈರಣ್ಣ, ತಾಯಿ ಅಕ್ಷತಾ ಅವರು, ದುರ್ಗಾದೇವಿ ದೇವಸ್ಥಾನದ ಬಳಿ ಹೂವು, ಹಣ್ಣು-ಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ತಾಯಿಯೇ ವರ್ಷಾಗೆ ಪ್ರೇರಣೆಯಾಗಿದ್ದು, ಆಟವಾಡುವ ವಯಸ್ಸಿನಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾಳೆ.

ಶಾಲೆಯಲ್ಲಿ ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ಮುಂದೆ ಇರುವ ವರ್ಷಾ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರತ್ನ, ಭಾತರ ರತ್ನ ಪ್ರಶಸ್ತಿ ಪುರಸ್ಕೃತರು, ದೇಶದಲ್ಲಿರುವ ರಾಜ್ಯಗಳು, ಜಿಲ್ಲೆಗಳು, ತಾಲೂಕುಗಳು, ರಾಜಧಾನಿಗಳು, ನದಿಗಳು, ಈವರೆಗಿನ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ರಾಜ್ಯದಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಹೆಸರುಗಳನ್ನು ಕೇಳಿದರೆ, ಥಟ್ಟನೆ ತನ್ನ ಅಪಾರ ಜ್ಞಾನಶಕ್ತಿಯಿಂದ ಉತ್ತರಿಸುತ್ತಾಳೆ.

ಈಕೆಯ ಈ ಸಾಧನೆ ಇಷ್ಟಕ್ಕೆ ಮುಗಿಯುವುದಿಲ್ಲ. 50 ಗಾದೆ ಮಾತುಗಳು, 15 ಸರ್ವಜ್ಞನ ವಚನಗಳು, 10 ಅಕ್ಕಮಹಾದೇವಿ ವಚನ ಬಾಯಿಪಾಠ ಮಾಡಿಕೊಂಡಿದ್ದಾಳೆ. ಪಂಚಾಗದ ತಿಥಿಗಳು, ನಕ್ಷತ್ರಗಳು, ಪಕ್ಷಗಳು, ರಾಜ್ಯದ ಮಹಾನಗರ ಪಾಲಿಕೆಗಳು, ಪುರಾಣದ ಹೆಸರುಗಳು, ಸೌರವ್ಯೂಹದ ಗ್ರಹಗಳು, ವೇದಗಳು, ಉಪನಿಷತ್ತುಗಳು ಸೇರಿದಂತೆ ಯಾವುದೇ ವಿಷಯ ಕುರಿತು ಪ್ರಶ್ನೆ ಕೇಳಿದರೂ ಉತ್ತರಿಸುತ್ತಾಳೆ. ಈಗಾಗಲೇ 1ರಿಂದ 30ರವರೆಗೆ ಮಗ್ಗಿ ಕಲಿತಿದ್ದು, ಗಣಿತದಲ್ಲೂ ಜಾಣೆ ಎನಿಸಿಕೊಂಡಿದ್ದಾಳೆ.

ಏನೇ ಕೇಳಿದರೂ ಏಕಾಗ್ರತೆಯಿಂದ ಆಲಿಸಿ, ಗ್ರಹಿಸಿಕೊಂಡು ಪ್ರಶ್ನೆ ಕೇಳಿದರೆ ಥಟ್ಟನೆ ಉತ್ತರಿಸುತ್ತಾಳೆ. ಒಮ್ಮೆ ಓದಿಕೊಂಡರೆ ಸಾಕು, ಅದನ್ನು ಚೆನ್ನಾಗಿ ಅರ್ಥಮಾಡಿಕೊಂಡು ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳುವ ಮಗಳು ವರ್ಷಾಗೆ ಉನ್ನತ ಶಿಕ್ಷಣ ಕೊಡಿಸಿ, ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ. | ಅಕ್ಷತಾ ರಾಯನಗೌಡ್ರ, ವರ್ಷಾಳ ತಾಯಿ ಇಂತಹ ವಿದ್ಯಾರ್ಥಿನಿ ನಮ್ಮ ಶಾಲೆಯಲ್ಲಿ ಅದರಲ್ಲೂ ನನ್ನ ತರಗತಿಯಲ್ಲಿ ಓದುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವಳಿಗೆ ಪಠ್ಯ ಅಥವಾ ಪಠ್ಯೇತರ ಯಾವ ಚಟುವಟಿಕೆ, ಸ್ಪರ್ಧೆ, ಪರೀಕ್ಷೆ ನೀಡಿದರೂ ತಕ್ಷಣ ಉತ್ತರಿಸುತ್ತಾಳೆ. ಈಕೆಯಲ್ಲಿ ಸಾಮಾನ್ಯ ಜ್ಞಾನ, ಅಪಾರ ನೆನಪಿನ ಶಕ್ತಿ ಇದೆ. ತರಗತಿಗಳಲ್ಲಿ ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದಾಳೆ. | ಮಂಜುಳಾ ದಾಳಿ, ಸಹಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಆಂಗ್ಲಮಾದ್ಯಮ ಶಾಲೆ ಹಿರೇಕೆರೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net