ವಿನೇಶ್ ಫೋಗಟ್​ಗೆ ಫೈನಲ್ ಆಡಲು ಅವಕಾಶವಿದೆಯೇ? ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ ಹೇಳಿದ್ದೇನು?

v
Published on

ನವದೆಹಲಿ: ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಭಾರೀ ಆಘಾತ ಎದುರಾಗಿದೆ. ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಕುಸ್ತಿ ಪಟು ವಿನೇಶ್‌ ಫೋಗಟ್‌ ಅನರ್ಹರಾಗಿದ್ದಾರೆ. ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣಕ್ಕೆ ವಿನೇಶ್‌ ಫೋಗಟ್‌ ಅನರ್ಹರಾಗಿದ್ದಾರೆ. ಒಲಿಂಪಿಕ್ಸ್‌ ತೀರ್ಪುಗಾರರ ವಿರುದ್ಧ ಭಾರತೀಯರು ಕಿಡಿಕಾರುತ್ತಿದ್ದಾರೆ.

ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ. ಕುಸ್ತಿ ಸ್ಪರ್ಧೆಯಿಂದ ವಿನೇಶ್‌ ಫೋಗಟ್‌ ಔಟ್‌ ಆಗಿದ್ದಾರೆ. ಇದು ಭಾರತೀಯರಿಗೆ ದೊಡ್ಡ ಶಾಕ್‌ ನೀಡಿದೆ ಅಂದ್ರೆ ತಪ್ಪಾಗಲ್ಲ. 50 ಕೆಜಿ ಕುಸ್ತಿಯಲ್ಲಿ ವಿನೇಶ್‌ ಫೋಗಟ್‌ ಫೈನಲ್‌ ಪ್ರವೇಶಿಸಿದ್ದರು. ಆದರೆ ಈಗ ವಿನೇಶ್‌ ಫೋಗಟ್‌ ಅನರ್ಹರಾಗಿ ಒಲಿಂಪಿಕ್ಸ್‌ನಿಂದ ಹೊರ ಬಿದ್ದಿದ್ದಾರೆ.

ಆದರೆ, ವಿನೇಶ್ ಫೋಗಟ್ ಫೈನಲ್ ಪಂದ್ಯವನ್ನು ಆಡಲು ಇನ್ನೂ ಏನಾದರೂ ಅವಕಾಶವಿದೆಯೇ ಎಂಬ ಪ್ರಶ್ನೆ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಮೂಡುತ್ತಿದೆ. ಇದೀಗ ಈ ಬಗ್ಗೆ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್ ಪ್ರತಿಕ್ರಿಯೆ ನೀಡಿದೆ.

ಅಂತಾರಾಷ್ಟ್ರೀಯ ಕುಸ್ತಿ ಫೆಡರೇಶನ್ (ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್‌) ಅಧ್ಯಕ್ಷ ನೆನಾದ್ ಲಾಲೋವಿಕ್ ಅವರು, ಪ್ಯಾರಿಸ್ ಒಲಿಂಪಿಕ್ಸ್‌ನಿಂದ ವಿನೇಶ್ ಫೋಗಟ್ ಅನರ್ಹತೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಇದರಲ್ಲಿ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಿಯಮಗಳನ್ನು ಗೌರವಿಸಬೇಕು. ವಿನೇಶ್​ಗೆ ಈ ರೀತಿ ಆಗಿರುವುದು ನನಗೆ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ.

ನಿಗದಿತ ತೂಕಕ್ಕಿಂತ ಹೆಚ್ಚು ತೂಕ ಇದ್ದರು. ಅದೇನೆ ಇದ್ದರೂ ನಿಯಮಗಳು ಮತ್ತು ವಿಧಾನವು ಸಾರ್ವಜನಿಕವಾಗಿದೆ. ನಿಯಮಬಾಹಿರವಾಗಿ ವಿನೇಶ್​ಗೆ ಫೈನಲ್ ಆಡಲು ಅವಕಾಶ ನೀಡಬೇಕು ಎಂದು ಜನರು ಮಾತನಾಡುತ್ತಿರುವ ರೀತಿ ಸಮಂಜಸವಲ್ಲ. ಆಟದಲ್ಲಿ ಭಾಗವಹಿಸಲು ಬರುವವರಿಗೆ ನಿಯಮಗಳ ಅರಿವಿದೆ. ಹೀಗಾಗಿ ವಿನೇಶ್​ಗೆ ಮುಂದೆಯೂ ಸಾಕಷ್ಟು ಅವಕಾಶಗಳಿವೆ. ಆದರೆ ಈ ಬಾರಿ ಜನರು ನಿರೀಕ್ಷಿಸುತ್ತಿರುವಂತೆ ಯಾವುದು ನಡೆಯುವುದಿಲ್ಲ ಎಂದಿದ್ದಾರೆ.

ಅಲ್ಲದೆ, ಭಾರತೀಯ ಕುಸ್ತಿಪಟು ಫೈನಲ್‌ಗೆ ತಲುಪಿರುವುದರಿಂದ ಅವರಿಗೆ ಬೆಳ್ಳಿ ಪದಕವನ್ನು ನೀಡುವುದು ಅಸಾಧ್ಯ ಮತ್ತು ಅವರಿಲ್ಲದೆ ಸ್ಪರ್ಧೆಯು ಮುಂದುವರಿಯುತ್ತದೆ ಎಂದು ಹೇಳಿದರು.

ವಿನೇಶ್‌ ಫೋಗಟ್‌ ಅವರನ್ನು ಅನರ್ಹಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್​ಗೆ ಭಾರತೀಯ ಕುಸ್ತಿ ಫೆಡರೇಶನ್ ಮನವಿ ಮಾಡಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಅಧ್ಯಕ್ಷೆ ಪಿಟಿ ಉಷಾ ಕೂಡ ತಮ್ಮ ಪ್ರತಿಕ್ರಿಯೆಯಲ್ಲಿ ಅಂತರಾಷ್ಟ್ರೀಯ ಕುಸ್ತಿ ಒಕ್ಕೂಟದ ಮುಂದೆ ತಮ್ಮ ಅಭಿಪ್ರಾಯಗಳನ್ನು ಬಲವಾಗಿ ಮಂಡಿಸುತ್ತಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net