

ನವದೆಹಲಿ: ನೇಪಾಳದಲ್ಲಿ ಕೆ.ಪಿ. ಶರ್ಮ ಓಲಿ ನೇತೃತ್ವದ ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಸರ್ಕಾರವನ್ನು ಉಳಿಸಲು ಚೀನಾ ಶತಾಯಗತಾಯ ಪ್ರಯತ್ನಿಸುತ್ತಿದ್ದೆ. ಇದಕ್ಕಾಗಿ ಅದು ನೇಪಾಳದಲ್ಲಿನ ತನ್ನ ರಾಯಭಾರಿ ಹೌ ಯಾಂಕಿ ಅವರನ್ನು ಬಳಸಿಕೊಳ್ಳುತ್ತಿದೆ.
ಮಂಗಳವಾರದಿಂದ ಅಖಾಡಕ್ಕೆ ಇಳಿಸಿರುವ ಹೌ ಯಾಂಕಿ ಅವರು ನೇಪಾಳದ ಅಧ್ಯಕ್ಷೆ ಬಿದ್ಯಾ ಭಂಡಾರಿ ಸೇರಿ ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ವಿವಿಧ ಮುಖಂಡರ ಜತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಓಲಿ ವಿರುದ್ಧ ಬಂಡಾಯ ಎದ್ದಿರುವವರನ್ನು ಓಲೈಸಲು ಶತಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ಚೀನಾಕ್ಕೆ ಪರಮಾಪ್ತರೆನಿಸಿರುವ ಕೆ.ಪಿ. ಓಲಿ ಕೂಡ ಪುಷ್ಪ ಕಮಾಲ್ ಪ್ರಚಂಡಾ ಸೇರಿ ತಮ್ಮ ವಿರುದ್ಧ ಬಂಡಾಯ ಎದ್ದಿರುವವರನ್ನು ಓಲೈಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಇವರ ಈ ಪ್ರಯತ್ನಗಳು ಎಷ್ಟರ ಮಟ್ಟಿಗೆ ಸಫಲವಾಗಿವೆ ಎಂಬುದು ಬುಧವಾರ ನಿಗದಿಯಾಗಿರುವ ನೇಪಾಳ ಕಮ್ಯುನಿಷ್ಟ್ ಪಾರ್ಟಿಯ ಸ್ಥಾಯಿ ಸಮಿತಿ ಸಭೆಯ ಆಗುಹೋಗುಗಳು ನಿರ್ಣಯಿಸಲಿವೆ.
ಭಂಡಾರಿ ಅಲ್ಲದೆ ನೇಪಾಳದ ಪ್ರಭಾವಿ ನಾಯಕರು ಎನಿಸಿಕೊಂಡಿರುವ ಮಾಜಿ ಪ್ರಧಾನಿ ಮಾಧವ್ ನೇಪಾಳ ಮತ್ತು ಝಾಲಾನಾಥ್ ಖನಾಲ್ ಅವರನ್ನೂ ಹೌ ಯಾಂಕಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪುಷ್ಪ ಕಮಾಲ್ ದಹಾಲ್ ಪ್ರಚಂಡಾ ಅವರನ್ನೂ ಭೇಟಿಯಾಗಲು ಹೌ ಯಾಂಕಿ ಬಯಸಿದ್ದು, ಅದು ಇನ್ನೂ ಸಾಧ್ಯವಾಗಿಲ್ಲ ಎನ್ನಲಾಗಿದೆ.
ನೇಪಾಳ ಕಮುನಿಸ್ಟ್ ಪಾರ್ಟಿಯ ಅತ್ಯಂತ ಪ್ರಭಾವಿ ಎನಿಸಿರುವ 44 ಸದಸ್ಯ ಬಲದ ಸ್ಥಾಯಿ ಸಮಿತಿಯಲ್ಲಿ 30 ಸದಸ್ಯರು ಓಲಿಯ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ. ಆದರೂ ಓಲಿ ಬಗ್ಗುತ್ತಿಲ್ಲ. ಹೀಗಾಗಿ ರಾಜೀನಾಮೆಗೆ ಒತ್ತಡ ಹೇರುವ ಜತೆಗೆ ಓಲಿಯನ್ನು ಕೆಳಗಿಳಿಸಲು ಪ್ರಚಂಡಾ, ನೇಪಾಳ್ ಮತ್ತು ಖನಾಲ್ರಂಥ ನಾಯಕರು ಇನ್ನೂ ಹೆಚ್ಚಿನ ರಾಜಕೀಯ ಕಾರ್ಯತಂತ್ರ ರೂಪಿಸುವ ಅವಶ್ಯಕತೆ ಇದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ.
ಒಂದು ವೇಳೆ ರಾಜೀನಾಮೆ ಕೊಡಬೇಕು ಎಂಬ ಪಕ್ಷದ ಸ್ಥಾಯಿ ಸಮಿತಿಯ ನಿರ್ಧಾರವನ್ನು ಓಲಿ ಪಾಲಿಸಲು ನಿರಾಕರಿಸಿದರೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಬಹುದಾಗಿದೆ. ಆದರೆ, ಪ್ರಚಂಡಾ ಮತ್ತಿತರರು ಈ ಕ್ರಮ ಕೈಗೊಳ್ಳುತ್ತಾರಾ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ.
ಪಕ್ಷವನ್ನು ವಿಭಜಿಸಿದ ಆರೋಪವನ್ನು ಹೊತ್ತುಕೊಳ್ಳಲು ಯಾವೊಬ್ಬ ಮುಖಂಡರೂ ಸಿದ್ಧರಿಲ್ಲ. ಅಲ್ಲದೆ, ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳು ಮೇಲ್ನೋಟಕ್ಕೆ ತೋರುತ್ತಿರುವಂತೆ ತುಂಬಾ ಗಂಭೀರವಾದದ್ದೂ ಏನಲ್ಲ. ಕುಳಿತು ಚರ್ಚಿಸಿದರೆ ಅವು ಕ್ಷಣಾರ್ಧದಲ್ಲಿ ಬಗೆಹರಿಯುತ್ತವೆ ಎಂದು ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಕೆ.ಪಿ. ಶರ್ಮ ಓಲಿ ಕೂಡ ಪಕ್ಷವನ್ನು ವಿಭಜಿಸಿ, ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವ ಚಿಂತನೆ ನಡೆಸಿದ್ದಾರೆ. ಆದರೆ, ಓಲಿ ಅವರ ಅಪ್ರಬುದ್ಧ ವಿದೇಶಾಂಗ ನೀತಿಯಿಂದಾಗಿ ನೆರೆಹೊರೆಯ ರಾಷ್ಟ್ರಗಳೊಂದಿಗೆ ನೇಪಾಳದ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನೇಪಾಳಿ ಕಾಂಗ್ರೆಸ್ ಕೂಡ ಓಲಿಯನ್ನು ಬೆಂಬಲಿಸಲು ಹಿಂದೇಟು ಹಾಕುತ್ತಿದೆ. ಜನತಾ ಸಮಾಜವಾದಿ ಪಕ್ಷದ ಮನೋಭಾವವೂ ಇದೇ ಆಗಿದೆ ಎನ್ನಲಾಗಿದೆ.