

ನವದೆಹಲಿ: ಸದ್ಯದ ಸಮಯದಲ್ಲಿ ಬಾಲಿವುಡ್ನಲ್ಲಿ ಯಶಸ್ವಿ ನಟ ಎಂದು ಕರೆಯಲ್ಪಡುವ ಕಾರ್ತಿಕ್ ಆರ್ಯನ್ ಗೆಲುವಿನ ಕುದುರೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರ ಚಿತ್ರ ಭೂಲ್ ಭುಲೈಯಾ 2022 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ. ಕಾರ್ತಿಕ್ ಆರ್ಯನ್ ಬಾಲಿವುಡ್ನಲ್ಲಿ ತನ್ನದೇ ಆದ ಸ್ಥಾನವನ್ನು ರೂಪಿಸಿಕೊಂಡಿದ್ದು ಒಂದರ ನಂತರ ಒಂದರಂತೆ ಹಿಟ್ಗಳನ್ನು ನೀಡುತ್ತಿದ್ದಾರೆ. ಅದಲ್ಲದೇ ಅಕ್ಷಯ್ ಕುಮಾರ್ ಬದಲಿಗೆ ಕಾಮಿಡಿ ಚಿತ್ರ ಹೇರಾ ಫೇರಿ 3ನಲ್ಲಿ ಕಾರ್ತಿಕ್ ಆರ್ಯನ್ ನಟಿಸಲಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡುತ್ತಿವೆ.
ಶೆಹಜಾದ ಚಿತ್ರ ಅಲ್ಲು ಅರ್ಜುನ್ ನಟಿಸಿದ್ದ ಅಲಾ ವೈಕುಂಠಪುರಮುಲು ಚಿತ್ರದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ರೋಹಿತ್ ಧವನ್, ಕೃತಿ ಸನೋನ್, ಮನೀಷಾ ಕೋಯ್ರಾಲಾ, ಪರೇಶ್ ರಾವಲ್ ಮುಂತಾದವರು ನಟಿಸಿದ್ದಾರೆ. ಆರ್ಯನ್ ನಟಿಸಿರುವ ಚಿತ್ರಗಳ ಪಟ್ಟಿ ವಿಭಿನ್ನವಾಗಿದೆ. ಅವರ 32 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮುಂಬರುವ ಸಿನಿಮಾ ಶೆಹಜಾದ ಚಿತ್ರತಂಡ ಮೊದಲ ಟೀಸರ್ಅನ್ನು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದು ಅಭಿಮಾನಿ ಒಬ್ಬರು 'ಅಲಾ ವೈಕುಂಠಪುರಮುಲು ಎನ್ನುವುದು ಒಂದು ಎಮೋಷನ್. ಯಾರಿಂದಲೂ ಅಲ್ಲು ಅರ್ಜುನ್ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರ ಪ್ರಕಾರ ಕಾರ್ತಿಕ್ ಆರ್ಯನ್ ಕೈಯಲ್ಲಿ ಅಲ್ಲು ಅರ್ಜುನ್ ಸ್ಟೈಲ್ ಅನುಕರಿಸಲು ಸಾಧ್ಯ ಆಗಿಲ್ಲ. ಇನ್ನೊಬ್ಬರಂತೂ ಬಾಲಿವುಡ್ ವತಿಯಿಂದ ಅಲ್ಲು ಅರ್ಜುನ್ಗೆ ಸಾರಿ ಕೂಡ ಕೇಳಿದ್ದಾರೆ. ಸದ್ಯ ಟ್ರೇಲರ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರ ಗೆಲ್ಲುತ್ತಾ ಇಲ್ಲವೇ ಸೋಲುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ. (ಏಜೆನ್ಸೀಸ್)