ನಾಯಕತ್ವ ತೊರೆದ ಕೊಹ್ಲಿಗೆ ಸ್ಫೂರ್ತಿಯಾಗುವುದೇ 1998ರ ತೆಂಡುಲ್ಕರ್ ಸಾಧನೆ?

sachin kohli web
Published on

ಬೆಂಗಳೂರು: ಬಿಸಿಸಿಐ 1997ರಲ್ಲಿ ಯಾವುದೇ ಮಾಹಿತಿ ನೀಡದೆ ಸಚಿನ್ ತೆಂಡುಲ್ಕರ್‌ರನ್ನು ಭಾರತ ತಂಡದ ನಾಯಕತ್ವದಿಂದ ಏಕಾಏಕಿಯಾಗಿ ವಜಾಗೊಳಿಸಿತ್ತು. ಇದರಿಂದ ಅವರು ಕುಗ್ಗಿರಲಿಲ್ಲ. ಅದರ ಮರುವರ್ಷ ಅಂದರೆ 1998ರಲ್ಲಿ 12 ಶತಕಗಳನ್ನು ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಜೃಂಭಿಸಿದ್ದರು. ಆ ಮೂಲಕ ಬಿಸಿಸಿಐಗೆ ತಮ್ಮ ಬ್ಯಾಟ್​ನಿಂದ ದಿಟ್ಟ ಉತ್ತರವನ್ನೇ ನೀಡಿದ್ದರು.

ಸ್ಟೀವ್ ವಾ ಸಾರಥ್ಯದ ಆಸೀಸ್ ತಂಡದೆದುರು 177 ರನ್ ಸಿಡಿಸಿದ್ದು ಈ ಪೈಕಿ ಸರ್ವಾಧಿಕವಾಗಿತ್ತು. ಟೆಸ್ಟ್-ಏಕದಿನ ಸೇರಿ 42 ಇನಿಂಗ್ಸ್‌ಗಳಲ್ಲಿ 8 ಅರ್ಧಶತಕಗಳೂ ಸೇರಿ ಒಟ್ಟು 2,541 ರನ್ ಸಿಡಿಸಿದ್ದರು. ಆಗಿನ ಬಲಿಷ್ಠ ಆಸೀಸ್ ವಿರುದ್ಧವೇ 6 ಶತಕ ಸಿಡಿಸಿದ್ದರು. ಕ್ರಿಕೆಟ್ ಪಂಡಿತರ ಪ್ರಕಾರ, ಸಚಿನ್ ವೃತ್ತಿಜೀವನದಲ್ಲಿ 1998 ಸುವರ್ಣ ವರ್ಷ.

ಇದೀಗ ವಿರಾಟ್ ಕೊಹ್ಲಿ ಕೂಡ ಬಿಸಿಸಿಐ ಜತೆಗಿನ ಜಟಾಪಟಿಯ ಬೆನ್ನಲ್ಲೇ ನಾಯಕತ್ವದಿಂದ ಮುಕ್ತರಾಗಿದ್ದು, ಬ್ಯಾಟಿಂಗ್ ಹೊಣೆ ಮಾತ್ರ ವಹಿಸಿಕೊಂಡಿರುವ ಅವರಿಗೂ ತೆಂಡುಲ್ಕರ್‌ರ 1998ರ ಸಾಧನೆ ಸ್ಫೂರ್ತಿಯಾಗುವ ನಿರೀಕ್ಷೆ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.

ವಿರಾಟ್ ಕೊಹ್ಲಿ ಕಳೆದ 14 ಏಕದಿನ ಇನಿಂಗ್ಸ್‌ಗಳಲ್ಲಿ 9 ಅರ್ಧಶತಕ ಬಾರಿಸಿದ್ದಾರೆ. ಈ ಪೈಕಿ 2 ಬಾರಿ 89 ರನ್ ಗಳಿಸಿದ್ದು ಗರಿಷ್ಠವಾಗಿದೆ. ಇದರಿಂದ ಶೀಘ್ರದಲ್ಲೇ ಅವರ ಶತಕದ ಬರ ನೀಗುವ ನಿರೀಕ್ಷೆ ಮೂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 70 ಶತಕ ಸಿಡಿಸಿರುವ ಕೊಹ್ಲಿ ಅವರ ಅಭಿಮಾನಿಗಳು 71ನೇ ಶತಕಕ್ಕಾಗಿ ಕಳೆದ 2 ವರ್ಷಗಳಿಂದ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net