ರಾಹುಲ್​ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ; ಶಾಸಕನ ಈ ಆಫರ್​ಗೆ ಕಾರಣ ಹೀಗಿದೆ..

Untitled-design-2024-09-16T152808.733
Published on

ಮುಂಬೈ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಶಿವಸೇನೆ ಶಾಸಕ ಸಂಜಯ್​​ ಗಾಯಕ್ವಾಡ್​​ ಘೋಷಿಸಿದ್ದಾರೆ. ರಾಹುಲ್​ಗಾಂಧಿ ಅವರು ಮೀಸಲಾತಿಯನ್ನು ಕೊನೆಗೊಳಿಸುವ ಕುರಿತು ಮಾತನಾಡಿದ್ದಾರೆ. ಇದು ಅವರ ಮೀಸಲಾತಿಯನ್ನು ಅಂತರ್ಗತವಾಗಿ ವಿರೋಧಿಸುವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಬಯಸುತ್ತಾರೆ. ಇದನ್ನು ವಿದೇಶದಲ್ಲಿ ಹೋಗಿ ಹೇಳುತ್ತಾರೆ. ಈ ಹೇಳಿಕೆ ಕಾಂಗ್ರೆಸ್​ನ ಅಸಲಿ ಮುಖವನ್ನು ಬಯಲು ಮಾಡಿದೆ. ರಾಹುಲ್​ ಗಾಂಧಿ ಅವರು ಹೇಳಿಕೆಗಳು ವಿಶ್ವಾಸಘಾತುಕತನವಾಗಿದೆ. ಮರಾಠರು, ಧಂಗರುಗಳು ಮತ್ತು ಒಬಿಸಿಗಳಂತಹ ಸಮುದಾಯಗಳು ಮೀಸಲಾತಿಗಾಗಿ ಹೋರಾಡುತ್ತಿವೆ. ಆದರೆ ಅದಕ್ಕೂ ಮೊದಲು ಅದರ ಪ್ರಯೋಜನಗಳನ್ನು ಕೊನೆಗೊಳಿಸುವ ಬಗ್ಗೆ ರಾಹುಲ್​ ಗಾಂಧಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಅಲ್ಲದೆ, ರಾಹುಲ್ ಗಾಂಧಿಯವರು ಸಂವಿಧಾನದ ಪುಸ್ತಕವನ್ನು ತೋರಿಸಿ ಬಿಜೆಪಿ ಅದನ್ನು ಬದಲಾಯಿಸುತ್ತದೆ ಎಂದು ಸುಳ್ಳು ಕಥೆಯನ್ನು ಹರಡುತ್ತಿದ್ದರು. ಆದರೆ ಕಾಂಗ್ರೆಸ್ ದೇಶವನ್ನು 400 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಲು ಯೋಜಿಸುತ್ತಿದೆ ಎಂದು ಆರೋಪಿಸಿದರು. ವಿದರ್ಭ ಪ್ರದೇಶದ ಬುಲ್ಧಾನ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿರುವ ಸಂಜಯ್​​ ಗಾಯಕ್ವಾಡ್​​ ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲನೆಲ್ಲ. ಕಳೆದ ತಿಂಗಳು ಶಾಸಕ ಸಂಜಯ್ ಅವರ ಕಾರನ್ನು ಪೊಲೀಸರು ತೊಳೆಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ನಂತರ ಸ್ಪಷ್ಟನೆ ನೀಡುವಾಗ ಗಾಯಕ್ವಾಡ್ ಅವರು ಪೊಲೀಸರು ಕಾರಿನೊಳಗೆ ವಾಂತಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.

ಸಂಜಯ್​ ಗಾಯಕ್ವಾಡ್​ ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ಆದರೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೀಸಲಾತಿಯನ್ನು ವಿರೋಧಿಸಿದರು, ಇದು ದೇಶದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯುವಂತಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಹೇಳಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಶಿಂಧೆ ಬಣದೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದೆ.

ಅಮೆರಿಕ ಪ್ರವಾಸದಲ್ಲಿರುವ ರಾಹುಲ್​ಗಾಂಧಿ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಇನ್ನು ಸಿಖ್ಖರ ಕುರಿತು ರಾಹುಲ್​ ಗಾಂಧಿ ಹೇಳಿದ ಮಾತನ್ನು ವಿರೋಧಿಸಿ ರವನೀತ್​ ಸಿಂಗ್​​​ ರಾಹುಲ್​​ ಗಾಂಧಿ ಅವರನ್ನು ‘ದೇಶದ ದೊಡ್ಡ ಶತ್ರು ಮತ್ತು ಭಯೋತ್ಪಾದಕ’ ಎಂದಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net