ಬೇಷರಮ್​ ರಂಗ್ ಹಾಡಿನ ವಿವಾದ: ಶಾರೂಖ್​ ಸಿಕ್ಕರೆ ಜೀವಂತ ಸುಡುತ್ತೇನೆಂದ ಅಯೋಧ್ಯೆ ಸಂತ

Sharukh
Published on

ಮುಂಬೈ: ಶಾರೂಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದ ‘ಬೇಷರಮ್​ ರಂಗ್​’ ಹಾಡು ಬಿಡುಗಡೆಯಾಗಿದ್ದು ಸಾಕಷ್ಟು ವೈರಲ್​ ಆಗಿದೆ. ಅಷ್ಟೇ ಅಲ್ಲದೆ, ವಿವಾದವನ್ನು ಹುಟ್ಟುಹಾಕಿದ್ದು, ತಕ್ಷಣಕ್ಕೆ ಆ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿದಿನ ಒಬ್ಬೊಬ್ಬರು ಚಿತ್ರದ ಬಗ್ಗೆ ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ.

ಅಷ್ಟಕ್ಕೂ ವಿವಾದಕ್ಕೆ ಕಾರಣ ಯಾವುದು ಎಂದು ನೋಡುವುದಾದರೆ, ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ಮೈಮಾಟ ತೋರಿಸಿದ್ದಾರೆ. ಕೇಸರಿ ಬಣ್ಣದ ಬಿಕಿನಿ ತೋರಿಸಿರುವುದು ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೆಲವರು ಈ ಚಿತ್ರವನ್ನು ನಿಷೇಧಿಸುವುದಕ್ಕೆ ಹೊರಟಿದ್ದಾರೆ. ಅಷ್ಟೇ ಅಲ್ಲ, ‘Boycott Pathaan’ ಎನ್ನುವ ಅಭಿಯಾನ ಸಹ ಶುರು ಮಾಡಿದ್ದಾರೆ.

ಬಿಜೆಪಿ ನಾಯಕರು ಹಾಗೂ ಬಲಪಂಥೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಅಯೋಧ್ಯೆಯ ಸಂತರೊಬ್ಬರು ಚಿತ್ರದ ನಾಯಕ ಶಾರೂಖ್​ ವಿರುದ್ಧ ಶಾಕಿಂಗ್​ ಕಾಮೆಂಟ್​ ಮಾಡಿದ್ದಾರೆ. ಅಯೋಧ್ಯೆಯ ತಪಸ್ವಿ ಛಾವ್ನಿ ಮೂಲದ ಪರಮಹಂಸ ಆಚಾರ್ಯರು ಶಾರೂಖ್​ ವಿರುದ್ಧ ಹರಿಹಾಯ್ದಿದ್ದು, ಶಾರೂಖ್​ ಸಿಕ್ಕರೆ ಜೀವಂತ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ. ನಮ್ಮ ಸನಾತನ ಧರ್ಮದ ಜನರು ಈ ಬಗ್ಗೆ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ನಾವು ಶಾರೂಖ್ ಖಾನ್ ಅವರ ಪೋಸ್ಟರ್ ಅನ್ನು ಸುಟ್ಟು ಹಾಕಿದ್ದೇವೆ. ನಾನು ಜಿಹಾದಿ ಶಾರೂಖ್ ಖಾನ್ ಅವರನ್ನು ಭೇಟಿಯಾದರೆ, ಜೀವಂತವಾಗಿ ಸುಡುತ್ತೇನೆ ಎಂದು ಕ್ಯಾಮೆರಾ ಮುಂದೆಯೇ ಪರಮಹಂಸ ಆಚಾರ್ಯರು ಹೇಳಿದರು.

ಅಷ್ಟಕ್ಕೇ ಮಾತು ನಿಲ್ಲಿಸದೇ ಮುಂದುವರಿಸಿದ ಆಚಾರ್ಯರು, ಪಠಾಣ್ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಿದರೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದರು. ಶಾರೂಖ್ ಖಾನ್ ಅವರ 'ಪಠಾಣ್' ಚಿತ್ರವನ್ನು ಬಹಿಷ್ಕರಿಸುವಂತೆ ಜನರಿಗೆ ಮನವಿ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net