

ಮುಂಬೈ: ಫೆಬ್ರವರಿ 19ರಿಂದ ಮಾರ್ಚ್ 20ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಮೊಹಮ್ಮದ್ ಶಮಿ (Mohammed Shami), ಕುಲ್ದೀಪ್ ಯಾದವ್ (Kuldeep Yadav), ಹಾರ್ದಿಕ್ ಪಾಂಡ್ಯ (Hardik Pandya) ಸೇರಿದಂತೆ ಪ್ರಮುಖರು ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. 2023ರಲ್ಲಿ ಏಕದಿನ ವಿಶ್ವಕಪ್ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ ರಾಷ್ಟ್ರೀಯ ತಂಡಕ್ಕೆ ಪುನರಾಗಮ ಮಾಡಿದ್ದು, ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಶಮಿ ಕಮ್ಬ್ಯಾಕ್ ಮಾಡಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಸೌರವ್ ಗಂಗೂಲಿ (Sourav Ganguly), ನನ್ನ ಪ್ರಕಾರ ವೈಟ್ಬಾಲ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ. ವಿರಾಟ್ ಕೊಹ್ಲಿ ಜೀವಿತಾವಧಿಯಲ್ಲಿ ಒಮ್ಮೆ ಕಾಣುವ ಕ್ರಿಕೆಟಿಗ. ವೃತ್ತಿಜೀವನದಲ್ಲಿ 81 ಅಂತರಾಷ್ಟ್ರೀಯ ಶತಕಗಳನ್ನು ಗಳಿಸುವುದು ನಂಬಲಾಗದ ಸಂಗತಿಯಾಗಿದೆ. ನನಗೆ, ಅವರು ಬಹುಶಃ ಜಗತ್ತು ಕಂಡ ಶ್ರೇಷ್ಠ ವೈಟ್-ಬಾಲ್ ಆಟಗಾರರಲ್ಲಿ ಒಬ್ಬರು ಎಂದು ಹೇಳಿದ್ದಾರೆ.
ಶಮಿ (Mohammed Shami) ತಂಡಕ್ಕೆ ವಾಪಸ್ ಆಗಿರುವುದು ನನಗೆ ತುಂಬಾ ಖುಷಿ ನೀಡಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಶಮಿ ಬಹಳ ಸಮಯದ ನಂತರ ತಂಡಕ್ಕೆ ವಾಪಸ್ ಆಗಿದ್ದು, ಮೊದಲಿಗೆ ನರ್ವಸ್ ಆಗುತ್ತಾರೆ ಎಂದು ನನಗೆ ತಿಳಿದಿದೆ. ದೇಶೀಯ ಕ್ರಿಕೆಟ್ನಲ್ಲಿ ಬಂಗಾಳಕ್ಕೆ ಸಾಕಷ್ಟು ಬೌಲಿಂಗ್ ಮಾಡಿದ್ದಾರೆ, ಅದು ಮುಂಬರುವ ದಿನಗಳಲ್ಲಿ ಅವರಿಗೆ ಸಹಾಯ ಮಾಡಲಿದೆ. ನನ್ನ ಪ್ರಕಾರ ಬುಮ್ರಾ ಬಳಿಕ ಶಮಿ ಭಾರತ ತಂಡ ಕಂಡ ಅತ್ಯಂತ ಉತ್ತಮ ಬೌಲರ್ಗಳಲ್ಲಿ ಒಬ್ಬರು ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬಣ್ಣಿಸಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.