ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತೊಂದು ಬೆದರಿಕೆ ವಿಡಿಯೋ ಬಿಡುಗಡೆ ಮಾಡಿದ್ದು, ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. 2001ರಲ್ಲಿ ಭಯೋತ್ಪಾದಕರು ಸಂಸತ್ತಿನ ಮೇಲೆ ನಡೆಸಿದ ದಾಳಿಗೆ ಇದೇ ಡಿ.13ರಂದು 22 ವರ್ಷ ತುಂಬಲಿದೆ.
ಸಂಸತ್ತಿನ ದಾಳಿಯ ಅಪರಾಧಿ ಅಫ್ಜಲ್ ಗುರು ಪೋಸ್ಟರ್ ಒಳಗೊಂಡಿರುವ ವಿಡಿಯೋಗೆ “ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ” ಎಂದು ಅಡಿಬರಹ ನೀಡಲಾಗಿದೆ. ನನ್ನನ್ನು ಕೊಲ್ಲುವ ಭಾರತೀಯ ಏಜೆನ್ಸಿಗಳ ಸಂಚು ವಿಫಲವಾಗಿದೆ. ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಮೂಲಕ ನನ್ನ ವಿರುದ್ಧದ ಸಂಚಿಗೆ ಪ್ರತಿಕ್ರಿಯಿಸುವುದಾಗಿ ಸವಾಲು ಹಾಕಿದ್ದಾನೆ.
ಸಂಸತ್ತಿನಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಡಿ.22ರವರೆಗೂ ಅಧಿವೇಶನ ಮುಂದುವರಿಯಲಿದೆ. ಇದರ ನಡುವೆಯೇ ಪನ್ನುನ್ ಈ ಬೆದರಿಕೆ ವಿಡಿಯೋ ಹರಿಬಿಟ್ಟಿದ್ದಾನೆ. ಇದರ ಬೆನ್ನಲ್ಲೇ ಭದ್ರತಾ ಏಜೆನ್ಸಿಗಳು ಹೈ-ಅಲರ್ಟ್ ಆಗಿದೆ. ಮೂಲಗಳ ಪ್ರಕಾರ ಕೆ-2 ಎಂದು ಕರೆಯಲ್ಪಡುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಕಾಶ್ಮೀರ-ಖಲಿಸ್ತಾನ್ ಡೆಸ್ಕ್, ಭಾರತ ವಿರೋಧಿ ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಪನ್ನುನ್‌ಗೆ ಸಹಾಯ ಮಾಡುತ್ತಿದೆ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ.
ಖಲಿಸ್ತಾನಿ ಉಗ್ರ ಪನ್ನುನ್ ಕೊಲೆಯ ಸಂಚನ್ನು ಯುಎಸ್ ವಿಫಲಗೊಳಿಸಿದ್ದು, ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂಬ ಕಳವಳದ ಮೇಲೆ ಯುಎಸ್, ಭಾರತಕ್ಕೆ ಎಚ್ಚರಿಕೆ ನೀಡಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ಕೆಲ ದಿನಗಳ ಹಿಂದಷ್ಟೇ ವರದಿ ಮಾಡಿದೆ. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ 52 ವರ್ಷದ ನಿಖಿಲ್ ಗುಪ್ತಾ ವಿರುದ್ಧ ಯುಎಸ್ ಜಸ್ಟೀಸ್ ಡಿಪಾರ್ಟ್ಮೆಂಟ್ ಪ್ರಕರಣ ದಾಖಲಿಸಿದೆ. ಭಾರತ ಸರ್ಕಾರದ ಉದ್ಯೋಗಿ ತನ್ನನ್ನು “ಭದ್ರತಾ ನಿರ್ವಹಣೆ” ಮತ್ತು “ಗುಪ್ತಚರ” ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಫೀಲ್ಡ್ ಆಫೀಸರ್ ಎಂದು ಹೇಳಿಕೊಂಡಿದ್ದು, ಆತನ ವಿರುದ್ಧ ಆರೋಪ ಸಾಬೀತಾದರೆ, ಕೊಲೆಗೆ ಸುಪಾರಿ ಮತ್ತು ಕೊಲೆ ಮಾಡಲು ಸಂಚು ರೂಪಿಸಿದ ಆರೋಪಗಳ ಮೇಲೆ ಕನಿಷ್ಠ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಯುಎಸ್ ಅಟಾರ್ನಿ ಮ್ಯಾಥ್ಯೂ ಜಿ ಓಲ್ಸೆನ್ ಹೇಳಿದ್ದಾರೆ.
ಅಮೆರಿಕ ಅಧಿಕಾರಿಗಳ ಪ್ರಕಾರ ಹತ್ಯೆಯನ್ನು ನಡೆಸಲು ಒಬ್ಬ ಹಂತಕನಿಗೆ $100,000 ಪಾವತಿಸಲು ಗುಪ್ತಾ ಒಪ್ಪಿಕೊಂಡಿದ್ದನು. 2023ರ ಜೂನ್ 9ರಂದು ಈಗಾಗಲೇ $15,000 ಮುಂಗಡ ಪಾವತಿಯನ್ನು ಮಾಡಲಾಗಿತ್ತು. ಪನ್ನುನ್ನನ್ನು ನ್ಯೂಯಾರ್ಕ್ ನಗರದಲ್ಲೇ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಪನ್ನುನ್, ಭಾರತದಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಗುಂಪಾಗಿರುವ ಸಿಖ್‌ಗಳಿಗೆ ಸಾರ್ವಭೌಮ ರಾಜ್ಯವನ್ನು ಸ್ಥಾಪಿಸಲು ಸಾರ್ವಜನಿಕವಾಗಿ ಪ್ರತಿಪಾದಿಸಿದ ಭಾರತೀಯ ಮೂಲದ ಯುಎಸ್ ಪ್ರಜೆ ಎಂದು ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆ ಡಾಮಿಯನ್ ವಿಲಿಯಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರೋಪ ಬಂದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಭಾರತ, ಅಮೆರಿಕದ ನೆಲದಲ್ಲಿ ಸಿಖ್ ಉಗ್ರರನ್ನು ಕೊಲ್ಲಲು ಸಂಚು ರೂಪಿಸಿದ ಆರೋಪಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿರುವುದಾಗಿ ಹೇಳಿದೆ. ಈ ವಿಷಯದ ಎಲ್ಲಾ ಸಂಬಂಧಿತ ಅಂಶಗಳನ್ನು ಪರಿಶೀಲಿಸಲು ಭಾರತವು ನವೆಂಬರ್ 18 ರಂದು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚನೆ ಮಾಡಿದೆ.
ಯಾರು ಈ ಪನ್ನುನ್
ಪಂಜಾಬ್ನ ಅಮೃತಸರದಲ್ಲಿ ಹುಟ್ಟಿದ ಪನ್ನುನ್, 2019ರಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಕಣ್ಗಾವಲಿನಲ್ಲಿ ಇದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಮತ್ತು ನಿಯೋಜಿಸುವಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸಿದ್ದಾನೆ ಮತ್ತು ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಬೆದರಿಕೆ ತಂತ್ರಗಳ ಮೂಲಕ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2021ರ ಫೆಬ್ರವರಿ 3ರಂದು ಪನ್ನುನ್ ವಿರುದ್ಧ ಎನ್ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್ 29ರಂದು ಸರ್ಕಾರ ಘೋಷಣೆ ಮಾಡಿದೆ. (ಏಜೆನ್ಸೀಸ್)
ಖಲಿಸ್ತಾನಿ ಉಗ್ರನ ಹತ್ಯೆಗೆ ಅಮೆರಿಕದಲ್ಲಿ ಸಂಚು ಆರೋಪ: ಭಾರತೀಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಹಮಾಸ್ ರೀತಿಯಲ್ಲೇ ಪಂಜಾಬ್ಗಾಗಿ ದಾಳಿ ನಡೆಸುತ್ತೇವೆ: ಭಾರತಕ್ಕೆ ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ..!
ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಪನ್ನು ಹತ್ಯೆಗೆ ಸಂಚು: ಭಾರತ ಕೊಟ್ಟ ಉತ್ತರವೇನು?