

IND vs PAK Final: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿ ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು (ಸೆ.28) ಫೈನಲ್ ಪಂದ್ಯ 7 ಗಂಟೆಗೆ ಆರಂಭವಾಗಲಿದ್ದು, ಭಾರೀ ಪೈಪೋಟಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರುನೋಡುತ್ತಿವೆ. ಈ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹಲವು ದಾಖಲೆಗಳನ್ನು ಮುರಿಯುವತ್ತ ಸಾಗಿರುವುದು ಸದ್ಯ ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದೆ.
ಟೂರ್ನಿ ಆರಂಭದಿಂದಲೂ ಸೂಪರ್ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ, ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟರ್ ಆಗಿ ಅತ್ಯಧಿಕ ರನ್ ಗಳಿಸುತ್ತಿದ್ದಾರೆ. ಆರು ಪಂದ್ಯಗಳಲ್ಲಿ 51.50 ಸರಾಸರಿ ಮತ್ತು 204.63 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 309 ರನ್ ದಾಖಲಿಸಿರುವ ಅಭಿಷೇಕ್, ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ 11 ರನ್ ಗಳಿಸಿದರೆ, ಬಹುರಾಷ್ಟ್ರಗಳ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಅಭಿಷೇಕ್ ಇತಿಹಾಸ ಬರೆಯಲಿದ್ದಾರೆ. ಇದೇನಾದರೂ ಸಂಭವಿಸಿದರೆ, ಅವರು ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ. 2014ರ ಟಿ20 ವಿಶ್ವಕಪ್‌ನಲ್ಲಿ, ಕೊಹ್ಲಿ 6 ಪಂದ್ಯಗಳಲ್ಲಿ 319 ರನ್ ಗಳಿಸಿದ್ದು, ಅದರಲ್ಲಿ 4 ಅರ್ಧಶತಕಗಳು ಸೇರಿವೆ.
ಇದೇ ಪಾಕ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ 23 ರನ್ ಗಳಿಸಿದರೆ, ಅಂತರರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಅಥವಾ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಲಿದ್ದಾರೆ. 2023ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 5 ಟಿ20 ಪಂದ್ಯಗಳಲ್ಲಿ 331 ರನ್ ಗಳಿಸಿದ ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ರನ್ನು ಅಭಿಷೇಕ್ ಹಿಂದಿಕ್ಕಲಿದ್ದಾರೆ.
ಇಂದಿನ ಪಂದ್ಯದಲ್ಲಿ 30ಕ್ಕೂ ಅಧಿಕ ರನ್ ಗಳಿಸಿದರೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಬಾರಿ ಈ ಸಾಧನೆಗೈದ ಆಟಗಾರ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾಗಲಿದ್ದಾರೆ. ಈ ವಿಷಯದಲ್ಲಿ ರೋಹಿತ್ ಶರ್ಮಾ ಮತ್ತು ಮೊಹಮ್ಮದ್ ರಿಜ್ವಾನ್ರನ್ನು ಯುವ ಬ್ಯಾಟರ್ ಮೀರಿಸಲಿದ್ದಾರೆ,(ಏಜೆನ್ಸೀಸ್).