

ಪುತ್ತೂರು ಗ್ರಾಮಾಂತರ: ಕಳೆದ ಭಾನುವಾರ ಪೆರ್ನಾಜೆ ಪರಿಸರಕ್ಕೆ ಬಂದು ಕೃಷಿ ಹಾನಿ ಮಾಡಿದ್ದ ಕಾಡಾನೆಗಳು ಶುಕ್ರವಾರ ರಾತ್ರಿ ಪೆರ್ನಾಜೆ-ಮಳಿ ಪರಿಸರಕ್ಕೆ ಮತ್ತೆ ಲಗ್ಗೆಯಿಟ್ಟು ಅಪಾರ ಕೃಷಿ ಹಾನಿ ಮಾಡಿವೆ. ನಿರಂತರವಾಗಿ ಪೆರ್ನಾಜೆ-ಅಮ್ಚಿನಡ್ಕ ಪರಿಸರಕ್ಕೆ ಕಾಡಾನೆಗಳು ಬಂದು ಕೃಷಿ ಹಾನಿ ಮಾಡುತ್ತಿರುವುದರಿಂದ ಈ ಭಾಗದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ಆನೆಗುಂಡಿ ರಕ್ಷಿತಾರಣ್ಯ ಪ್ರದೇಶದಿಂದ ಇಳಿದು ರಾತ್ರಿ ವೇಳೆ ಜನವಸತಿ ಪ್ರದೇಶಗಳಾದ ಪೆರ್ನಾಜೆ, ಅಮ್ಚಿನಡ್ಕ, ಮುಖಾರಿಮೂಲೆ ಪರಿಸರಕ್ಕೆ ಕಾಲಿಟ್ಟು ಕೃಷಿ ಹಾನಿ ಮಾಡುತ್ತಿರುವ ಕಾಡಾನೆಗಳು ಮುಂಜಾನೆಯ ವೇಳೆ ಮತ್ತೆ ಆನೆಗುಂಡಿ ರಕ್ಷಿತಾರಣ್ಯ ಪ್ರದೇಶ ಸೇರಿಕೊಳ್ಳುತ್ತಿವೆ.
ಗುರುವಾರ ರಾತ್ರಿ ಅಮ್ಚಿನಡ್ಕ ಸಮೀಪದ ಮುಖಾರಿಮೂಲೆ, ಅಂಕೋತಿಮಾರು ಪರಿಸರಕ್ಕೆ ಕಾಡಾನೆಗಳು ಬಂದು ಕೃಷಿ ಹಾನಿ ಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ರಾತ್ರಿ ಈ ಪರಿಸರಕ್ಕೆ ತೆರಳಿ ಗಸ್ತು ತಿರುಗಿದ್ದರು. ಆದರೆ ಕಾಡಾನೆಗಳು ಪೆರ್ನಾಜೆ ಮಳಿ ಕಡೆಗೆ ಹೋಗಿ ಕೃಷಿ ನಾಶ ಮಾಡಿರುವುದು ರಾತ್ರಿ ವೇಳೆ ಇಲಾಖೆಯ ಮತ್ತು ಅಲ್ಲಿನ ಕೃಷಿಕರ ಗಮನಕ್ಕೆ ಬಂದಿರಲಿಲ್ಲ. ಕಾಡಾನೆಗಳು ಕೃಷಿ ನಾಶ ಮಾಡಿರುವ ವಿಚಾರ ಶನಿವಾರ ಬೆಳಗ್ಗೆಯಷ್ಟೇ ಅಲ್ಲಿನ ಕೃಷಿಕರ ಗಮನಕ್ಕೆ ಬಂದಿತ್ತು.
ಶನಿವಾರ ಅರಣ್ಯ ಇಲಾಖೆಯ ಪಾಣಾಜೆ ಉಪವಲ ಅರಣ್ಯಾಧಿಕಾರಿ ಮದನ್, ಪುತ್ತೂರು ಕೇಂದ್ರ ಕಚೇರಿಯ ಉಪವಲ ಅರಣ್ಯಾಧಿಕಾರಿ ನಿಂಗರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.