ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಒಂಟಿ ಸಲಗದ ಉಪಟಳದಿಂದ ಕೃಷಿಕರು, ಆಸುಪಾಸಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾದ ಘಟನೆ ವರದಿಯಾಗಿದೆ.
ಈ ಒಂಟಿ ಸಲಗ ಗುರುವಾರ ರಾತ್ರಿ ಕೊಟೆಚ್ಚಾರ್ ನಿವಾಸಿ ಶಾಂತಪ್ಪ ಗೌಡರ ಕೃಷಿ ಹಾನಿ ಮಾಡಿ ನೀರಿಗೆ ಅಳವಡಿಸಿದ ಪೈಪು ಒಡೆದು ಹಾಕಿದೆ. ಸಮೀಪದ ನಿವಾಸಿ ಮಹಮ್ಮದ್ ಎಂಬುವರ ಮನೆ ಅಂಗಳಕ್ಕೂ ಅಗಮಿಸಿದ್ದು, ಬಾಳೆ ಗಿಡ ಮಗುಚಿ ಹಾಕಿ ಗೀಳಿಟ್ಟು ಸ್ಥಳೀಯರ ನಿದ್ದೆಗೆಡಿಸಿದೆ. ಬಳಿಕ ಗ್ರಾಮಸ್ಥರು ಸುಡುಮದ್ದು ಸಿಡಿಸಿದ ಬೆನ್ನಿಗೆ ನೇತ್ರಾವತಿ ನದಿ ದಾಟಿ ನೆರೆಂಕಿಮಲೆ ಕಾಡಿಗೆ ತೆರಳಿರುವುದಾಗಿ ತಿಳಿದು ಬಂದಿದೆ. ಕೆಲ ವರ್ಷಗಳಿಂದ ಆನೆ ತನ್ನ ಸಂಚಾರಕ್ಕಾಗಿ ಈ ಪರಿಸರವನ್ನು ಆಯ್ಕೆ ಮಾಡಿಕೊಂಡಂತಿದ್ದು, ಒಂಟಿ ಸಲಗದ ಸಂಚಾರ ಈ ಪರಿಸರದ ಮಂದಿಯನ್ನು ಕಂಗೆಡಿಸುವಂತೆ ಮಾಡಿದೆ.