ಸರ್ಕಾರಿ ಕೆಲಸ ಸಿಗುತ್ತದೆಂದು ಪತಿಯನ್ನೇ ಕೊಂದ ಪತ್ನಿ; ತನಿಖೆಯಲ್ಲಿ ಬಯಲಾಯ್ತು ಮತ್ತಷ್ಟು ಆಘಾತಕಾರಿ ಅಂಶ

Crime Scene
Published on

ಹೈದರಾಬಾದ್​: ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ಸಿಗುತ್ತದೆ ಎಂಬ ದುರಾಸೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಹತ್ಯೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಉಸ್ಮಾನಪುರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಜಿಲ್ಲೆಯ ಕಣಗಲ್ ಮಂಡಲ ವ್ಯಾಪ್ತಿಯ ಚಾರ್ಲಗೌರರಂನಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಅಟೆಂಡರ್ ಆಗಿದ್ದ 44 ವರ್ಷದ ಮೊಹಮ್ಮದ್ ಖಲೀಲ್ ಹುಸೇನ್​ನನ್ನು ಪತ್ನಿ (Wife) ಅಕ್ಷರ್​ ಜಹಾ ಕೊಲೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ಈ ಕೊಲೆ ನಡೆದಿದ್ದು, ಆರೋಪಿಯನ್ನು ಈಗ ಬಂಧಿಸಲಾಗಿದೆ. 

ಅಕ್ಷರ್​ ಹಾಗೂ ಮೊಹಮ್ಮದ್ 2007ರಲ್ಲಿ ಮದುವೆಯಾಗಿದ್ದರು. ದಂಪತಿಗಳಿಗೆ ಮೂವರು ಮಕ್ಕಳಿದ್ದು, ನಲ್ಗೊಂಡದ ಉಸ್ಮಾನ್​ಪುರದಲ್ಲಿ ವಾಸಿಸುತ್ತಿದ್ದರು. ಕುಡಿತಕ್ಕೆ ದಾಸನಾಗಿದ್ದ ಮೊಹಮ್ಮದ್ ಪ್ರತಿನಿತ್ಯ ಹೆಂಡತಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ (Wife) ಅಕ್ಷರ್​ ಫೆಬ್ರವರಿ 22ರಂದು ಮನೆಯಲ್ಲಿ ಯಾರು ಇಲ್ಲದಿದ್ದಾಗ ಪತಿಯ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದು ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮೊಹಮ್ಮದ್​ ಫೆಬ್ರವರಿ 24ರಂದು ಮೃತಪಟ್ಟಿದ್ದ. ಬಳಿಕ ಇದು ಸಹಜ ಸಾವು ಎಂದು ಬಿಂಬಿಸಲಾಗಿತ್ತು.

Telangana Police

ಮೃತ ಮೊಹಮ್ಮದ್​ನ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಮೊಹಮ್ಮದ್ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು. ಬಳಿಕ ಪತ್ನಿ (Wife) ಅಕ್ಷರ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.

ಪ್ರತಿನಿತ್ಯ ನನ್ನ ಗಂಡ ನನಗೂ ಹಾಗೂ ನನ್ನ ಮೂವರು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಇವನನ್ನು ಕೊಂದರೆ ಈತನ ಕಾಟವೂ ತಪ್ಪುತ್ತದೆ ಮತ್ತು ಇವನ ಸರ್ಕಾರಿ ಕೆಲಸ ನನಗಲ್ಲದಿದ್ದರೂ ನನ್ನ ಮಕ್ಕಳಿಗಾದರೂ ಸಿಗುತ್ತದೆ ಆಗ ಎಲ್ಲಾ ಸಮಸ್ಯೆಯೂ ಮುಗಿದು ಹೋಗುತ್ತದೆ ಎಂದು ಭಾವಿಸಿ  ಈ ರೀತಿ ಮಾಡಿದೆ ಎಂದು ಅಕ್ಷರ್ ತಪ್ಪೊಪ್ಪಿಕೊಂಡಿದ್ದು, ಶೀಘ್ರದಲ್ಲೇ ಚಾರ್ಜ್​ಶೀಟ್​ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net