

ಬೆಂಗಳೂರು: ಇಂದು ಮಧ್ಯರಾತ್ರಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದ್ದು, ಭಾರತದಲ್ಲಿ ಗೋಚರಿಸಲಿದೆ. ಗ್ರಹಣದ ಆದಿ ಅಂತ್ಯಗಳಲ್ಲಿ ಸ್ನಾನವನ್ನೇಕೆ ಮಾಡಬೇಕು? ಇದಕ್ಕೆ ಬ್ರಹ್ಮಪುರಾಣ ಉತ್ತರ ನೀಡಿದೆ.
ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು (ಶನಿವಾರ) ನಡೆಯಲಿದೆ. ಭಾರತದಲ್ಲಿ ಮಧ್ಯರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ಮಧ್ಯರಾತ್ರಿ 1:5 ಗಂಟೆಗೆ ಚಂದ್ರಗ್ರಹಣ ಶುರುವಾಗಿ, 2:24ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟಾರೆ ಗ್ರಹಣದ ಅವಧಿ 1 ತಾಸು 19 ನಿಮಿಷ ಆಗಿದೆ.
ಗ್ರಹಣದ ಸ್ನಾನ ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಬೇಕು. ಗ್ರಹಣ ಹಿಡಿದಾಗ ಮಾಡುವ ಸ್ನಾನವನ್ನು ಸ್ಪರ್ಶಸ್ನಾನ ಎನ್ನುತ್ತಾರೆ. ಗ್ರಹಣ ಬಿಟ್ಟಾಗ ಮಾಡುವ ಸ್ನಾನವನ್ನು ಮೋಕ್ಷಸ್ನಾನ ಎನ್ನುತ್ತಾರೆ. ಎರಡೂ ಸಹ ಅತ್ಯವಶ್ಯವಾಗಿ ಮಾಡಲೇಬೇಕು.
ಗ್ರಹಣಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ನಿಮಗೆ ಹತ್ತಿರವಿರುವ ನದಿಗಳಿಗೆ ಹೋಗಿ ಸ್ನಾನ ಮಾಡುವದು ಮಹಾಪುಣ್ಯಪ್ರದ. ಸಮುದ್ರಸ್ನಾನ ಸರ್ವೋತ್ತಮ. ಶ್ರೀಮದಾಚಾರ್ಯರೂ ಸಹ ಗ್ರಹಣದ ಸಂದರ್ಭದಲ್ಲಿ ಸಮುದ್ರಸ್ನಾನ ಮಾಡಿದ ಘಟನೆಯನ್ನು ನಾವು ಮಧ್ವವಿಜಯದಲ್ಲಿ ಕೇಳುತ್ತೇವೆ.
ಗ್ರಹಣದ ಸಂದರ್ಭದಲ್ಲಿ ಮನುಷ್ಯರಿಗೆ ಅಶೌಚದ ಮೈಲಿಗೆ ಉಂಟಾಗುತ್ತದೆ. ಅದಕ್ಕೇ ಆರಂಭದಲ್ಲಿ ಸ್ನಾನ ಮಾಡಿಯೇ ದಾನಾದಿಗಳನ್ನು ಮಾಡಬೇಕು. ಅಂತ್ಯದಲ್ಲಿ ಸ್ನಾನ ಮಾಡಿದರೇ ಮುಂದಿನ ಕಾರ್ಯಗಳಿಗೆ ಶುದ್ಧಿ. ಗ್ರಹಣದ ಆರಂಭದಲ್ಲಿ ಸ್ನಾನ ಮಾಡಿದರೆ ಮಾತ್ರ ನಾವು ಮಾಡುವ ಜಪ, ಪಾರಾಯಣ ಮತ್ತು ದಾನಾದಿಗಳು ಫಲಪ್ರದ. ಇಲ್ಲದಿದ್ದರೆ ಸರ್ವಥಾ ಇಲ್ಲ. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ಗ್ರಹಣದ ಎರಡೂ ಸ್ನಾನಗಳನ್ನೂ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
ಗ್ರಹಣಕಾಲದಲ್ಲಿ ಮಾಡಬೇಕಾದ್ದು : ಗ್ರಹಣ ಆರಂಭವಾಗುತ್ತಿದ್ದಂತೆ ಉಟ್ಟಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು. ಇಡಿಯ ಗ್ರಹಣ ಕಾಲದಲ್ಲಿ ವಿಷ್ಣುಸ್ಮರಣೆ, ವಿಷ್ಣುನಮಸ್ಕಾರ, ಜಪ. ಪಾರಾಯಣಗಳನ್ನು ಮಾಡಬೇಕು. ಗ್ರಹಣದ ದೋಷವಿದ್ದವರು ಗ್ರಹಣಕಾಲದಲ್ಲಿ ಹೋಮವನ್ನು ಮಾಡಬಹುದು. ಗ್ರಹಣ ಕಾಲದಲ್ಲಿ ತರಕಾರಿ, ಧಾನ್ಯಗಳನ್ನು ದಾನ ಮಾಡಬಾರದು. ಯಾವ ವಸ್ತುವನ್ನು ಗ್ರಹಣದ ನಂತರವೂ ತೆಗೆದುಕೊಳ್ಳಲು ಬರುತ್ತದೆಯೋ ಅವನ್ನು ಮಾತ್ರ ದಾನ ಮಾಡಬೇಕು. ಗ್ರಹಣ ಬಿಟ್ಟ ಬಳಿಕ ಗ್ರಹಣಕಾಲದಲ್ಲಿ ಮುಟ್ಟಿರುವ ಸಕಲ ಬಟ್ಟೆಗಳನ್ನೂ ತೋಯಿಸಿ ಶುದ್ದಿ ಸ್ನಾನವನ್ನು ಮಾಡಬೇಕು.
ವಿಶೇಷ ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಕೆಲವು ವರದಿಗಳನ್ನು ಆಧರಿಸಿ ನೀಡುವ ಪ್ರಯತ್ನವಾಗಿದೆ. ಯಾವುದೇ ಮಾಹಿತಿ ಅಥವಾ ನಂಬಿಕೆಯನ್ನು ಕಾರ್ಯಗತಗೊಳಿಸುವ ಮೊದಲು, ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಬೇಕಾಗಿದೆ.