

David Warner : ಟಾಟಾ ಒಡೆತನದ ಏರ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಪೈಲಟ್ಗಳಿಗಾಗಿ ವಿಮಾನದೊಳಗೆ ಗಂಟೆಗಟ್ಟಲೆ ಕಾಯಬೇಕಾಯಿತು ಎಂದು ತಮ್ಮ ಎಕ್ಸ್ ಪುಟದಲ್ಲಿ ಅಸಮಾಧಾನ ಹೊರಹಾಕಿದ್ದು, ಏರ್ ಇಂಡಿಯಾ ಕೂಡ ಇದಕ್ಕೆ ಸ್ಪಷ್ಟನೆ ನೀಡಿದೆ.
ಪೈಲಟ್ಗಳಿಲ್ಲದೇ ವಿಮಾನದಲ್ಲಿ ಗಂಟೆಗಟ್ಟಲೆ ಕಾಯಬೇಕಾಯಿತು. ವಿಮಾನದಲ್ಲಿ ಪೈಲಟ್ಗಳಿಲ್ಲ ಎಂದು ತಿಳಿದಿದ್ದರೂ ನೀವು ಯಾಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದೀರಿ? ಎಂದು ಡೇವಿಡ್ ವಾರ್ನರ್ ಎಕ್ಸ್ನಲ್ಲಿ ಬರೆದಿದ್ದು, ಏರ್ ಇಂಡಿಯಾದ ಅಧಿಕೃತ ಎಕ್ಸ್ ಪುಟವನ್ನು ಟ್ಯಾಗ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಅವರ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಏರ್ ಇಂಡಿಯಾ ಕೂಡ ಪ್ರತಿಕ್ರಿಯಿಸಿದೆ.
ಆತ್ಮೀಯ ವಾರ್ನರ್, ಬೆಂಗಳೂರಿನಲ್ಲಿ ಇಂದಿನ ಕೆಟ್ಟ ಹವಾಮಾನವು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣದ ಅಡಚಣೆ ಮತ್ತು ವಿಳಂಬವನ್ನು ಉಂಟುಮಾಡಿದೆ. ಈ ಕಾರಣಗಳಿಂದಾಗಿ, ನಿಮ್ಮ ವಿಮಾನಕ್ಕೆ ನಿಯೋಜಿಸಲಾದ ಸಿಬ್ಬಂದಿ ವಿಳಂಬವಾಗಿದ್ದಾರೆ. ನಿಮ್ಮ ತಾಳ್ಮೆಗೆ ನಮ್ಮ ಧನ್ಯವಾದಗಳು ಎಂದು ಏರ್ ಇಂಡಿಯಾ ಉತ್ತರಿಸಿದೆ.
ಅಂದಹಾಗೆ ಡೇವಿಡ್ ವಾರ್ನರ್ ಅವರು 2025ರ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇತ್ತೀಚೆಗೆ ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು ಯಾರೂ ಖರೀದಿ ಮಾಡಲಿಲ್ಲ. ಐಪಿಎಲ್‌ನಲ್ಲಿ ಅವಕಾಶ ಸಿಗದಿದ್ದರೂ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಏಪ್ರಿಲ್ 11 ರಿಂದ ಮೇ 18 ರವರೆಗೆ ನಡೆಯಲಿರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 2025 ರಲ್ಲಿ ಕರಾಚಿ ಕಿಂಗ್ಸ್ ಪರ ಆಡಲು ವಾರ್ನರ್ ಅವರು ಸಿದ್ಧರಾಗಿದ್ದಾರೆ. ಮತ್ತೊಂದೆಡೆ, ಅವರು ಚಲನಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಅವರು ತೆಲುಗು ಚಿತ್ರ 'ರಾಬಿನ್ ವುಡ್' ನಲ್ಲಿ ನಟಿಸಿದ್ದು, ಈ ಚಿತ್ರ ಮಾರ್ಚ್ 28 ರಂದು ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರದ ನಿಮಿತ್ತ ವಾರ್ನರ್ ಹೈದರಾಬಾದ್ಗೆ ಬಂದಿಳಿದಿದ್ದಾರೆ. (ಏಜೆನ್ಸೀಸ್)