

ಧಾರವಾಡ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಹಿಂದೂಗಳನ್ನು ನಿರ್ಮೂಲನೆ ಮಾಡುವ ಯೋಜನಾ ಬದ್ಧ ಕಾರ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಆರೋಪಿಸಿದೆ. ಧಾರವಾಡದಲ್ಲಿ ನಡೆಯುತ್ತಿರುವ ಆರ್.ಎಸ್.ಎಸ್. ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗೆಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದೆ.
ಬಾಂಗ್ಲಾ ದಾಳಿ ಕುರಿತಾಗಿ ಆರ್.ಎಸ್.ಎಸ್. ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಈ ಬಗ್ಗೆ ಆರ್.ಎಸ್.ಎಸ್ ಸಹ ಸರಕಾರ್ಯವಾಹ ಅರುಣಕುಮಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಬೈಠಕ್‌ನಲ್ಲಿ ಒಂದೇ ಮಹತ್ವದ ಪ್ರಸ್ತಾಪ ಇತ್ತು. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದಾಳಿಗಳಾಗಿವೆ. ಇದು ಆಕಸ್ಮಿಕವಾಗಿ ಆದ ದಾಳಿಯೇ ಅಲ್ಲ. ಹಿಂದೂಗಳ ಮೇಲೆ ಭಯ ಹುಟ್ಟಿಸುವ ಮತ್ತು ಹಿಂದೂಗಳನ್ನು ನಿರ್ಮೂಲನೆ ಮಾಡೋ ಯೋಜನಾಬದ್ಧ ದಾಳಿಯಾಗಿತ್ತು ಎಂಬ ನಿಷ್ಕರ್ಷೆಗೆ ಬರಲಾಯಿತು ಎಂದು ಹೇಳಿದರು.
ಪಾಕ್‌ನಲ್ಲಿ ಯೋಜನಾಬದ್ಧವಾಗಿ ಹಂತಹಂತವಾಗಿ ಹಿಂದೂಗಳ ನಿರ್ಮೂಲನೆ ಮಾಡಿದ್ದಾರೆ. ಅದೇ ರೀತಿಯ ಷಡ್ಯಂತ್ರ ಬಾಂಗ್ಲಾದಲ್ಲಿಯೂ ಈಗ ನಡೆಯುತ್ತಿದೆ. ಬಾಂಗ್ಲಾದೇಶದ ಸರ್ಕಾರ ದಾಳಿಕೋರರ ಮೇಲೆ ತನಿಖೆ ಮಾಡಬೇಕು. ದಾಳಿಯ ನಿಜವಾದ ಅಪರಾಧಿಗಳನ್ನು ಹಿಡಿದು ಶಿಕ್ಷಿಸಬೇಕು. ಈ ರೀತಿಯ ದಾಳಿಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ನಾವು ಸುರಕ್ಷಿತವಾಗಿ ಜೀವನ ಮಾಡುತ್ತೇವೆಂಬ ಭಾವ ಅಲ್ಲಿನ ಹಿಂದೂಗಳಲ್ಲಿ ಬರುವಂತೆ ಮಾಡಬೇಕು ಎಂದು ಆರ್ಎಸ್ಎಸ್ ಆಗ್ರಹಿಸಿದೆ.
"ಸಣ್ಣ ಸಣ್ಣ ವಿಷಯಗಳ ಬಗ್ಗೆ ದೊಡ್ಡ ದೊಡ್ಡ ಸಂಸ್ಥೆಗಳು ಮಾತನಾಡುತ್ತವೆ. ವಿಶ್ವದಲ್ಲಿ ಸಾಕಷ್ಟು ಸಂಸ್ಥೆಗಳು ಏನೇನೋ ಧ್ವನಿ ಎತ್ತುತ್ತವೆ. ಆದರೆ ಆ ಮಾನವ ಹಕ್ಕುಗಳ ವಾಚ್ ಡಾಗ್‌ಗಳು ಮತ್ತು ವಿಶ್ವ ಸಂಸ್ಥೆಯ ಸಂಘಟನೆಗಳು ಈ ಬಗ್ಗೆ ಮೌನ ವಹಿಸಿರುವುದು ಖಂಡನೀಯ. ಹೀಗೆ ಸುಮ್ಮನೆ ಕುಳಿತವರ ಬಗ್ಗೆ ಪ್ರಶ್ನೆ ಎತ್ತಬೇಕು. ಬಾಂಗ್ಲಾದ ಕಟ್ಟರ ಮುಸ್ಲಿಮರು ಹಿಂದೂ ಸೇರಿ ಎಲ್ಲ ಮುಸ್ಲಿಂತೇರರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇಂತಹ ಚಟುವಟಿಕೆಗಳು ಆ ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಕಂಟಕ ಆಗುತ್ತವೆ" ಎಂದು ಆರ್ಎಸ್ಎಸ್ ಪ್ರಕಟಣೆ ನೀಡಿದೆ.
ಭಾರತ ಸರ್ಕಾರ ಸಹ ಈ ಬಗ್ಗೆ ಗಮನ ಹರಿಸಬೇಕು. ಜಾಗತಿಕವಾಗಿ ಹಿಂದೂ ಸಮಾಜಕ್ಕೆ ಸುರಕ್ಷತಾ ಪೂರ್ಣ ವಾತಾವರಣ ಬರಬೇಕಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಅಲ್ಲಿನ ಹಿಂದೂಗಳು ಮತ್ತು ಬೌದ್ಧಧರ್ಮೀಯರ ರಕ್ಷಣೆಗೆ ಸೂಕ್ತ ಎಚ್ಚರಿಕೆ ವಹಿಸುವಂತೆ ಬಾಂಗ್ಲಾದೇಶ ಸರ್ಕಾರವನ್ನು ಆಗ್ರಹಿಸಬೇಕು ಎಂದಿರುವ ಆರ್ಎಸ್ಎಸ್, ಈ ವಿಷಮ ಸಂದರ್ಭದಲ್ಲಿ ಹಿಂದೂಗಳ ಬೆಂಬಲಕ್ಕೆ ನಿಂತು ಇಸ್ಕಾನ್, ರಾಮಕೃಷ್ಣ ಮಿಷನ್, ವಿಎಚ್ಪಿ ಮುಂತಾದ ಹಿಂದೂ ಸಂಘಟನೆಗಳು ಉತ್ತಮ ಕಾರ್ಯ ಮಾಡಿವೆ ಎಂದು ಆರ್ಎಸ್ಎಸ್ ಹೇಳಿದೆ.