

ನ್ಯೂಯಾರ್ಕ್: ಕೌನ್ ಬನೇಗಾ ಕರೋಡ್ಪತಿ ಅಥವಾ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೂಲ ಅವತರಣಿಕೆಯಾದ ಹೂ ವಾಂಟ್ಸ್ ಟೂ ಬಿ ಎ ಮಿಲಿಯನೇರ್ನಲ್ಲಿ ಮುಜುಗರದ ಸಂಗತಿಯೊಂದು ನಡೆದಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೆ.ಪಿ. ಹೊಗಾನ್ ಎಂಬುವರಿಗೆ 16,000 ಡಾಲರ್ ಮೌಲ್ಯದ (ಅಂದಾಜು 11.75 ಲಕ್ಷ ರೂ.) ಪ್ರಶ್ನೆಯೊಂದಕ್ಕೆ ಉತ್ತರ ಗೊತ್ತಾಗಲಿಲ್ಲ. ಜರ್ಮನಿಯಲ್ಲಿ ಯಾವುದು ವಾರಾಂತ್ಯದ ಭಾಗವಾಗಿದೆ ಎಂದು ಪ್ರಶ್ನೆ ಕೇಳಿ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಪತ್ನಿ ಕೆಲ ಕಾಲ ಜರ್ಮನಿಯಲ್ಲಿದ್ದರಿಂದ ಆಕೆಗೆ ಉತ್ತರ ಗೊತ್ತಿರಬಹುದು ಎಂದು ಉತ್ತರ ಕೇಳಲು ಸ್ಪರ್ಧಿ ಫೋನ್-ಎ- ಫ್ರೆಂಡ್ಗೆ ಮೊರೆ ಹೋಗುತ್ತಾನೆ.
ಅಂತೆಯೇ ಕಾರ್ಯಕ್ರಮದ ಆಯೋಜಕರು ಆತ ನೀಡಿದ ನಂಬರ್ಗೆ ಕರೆ ಮಾಡುತ್ತಾರೆ. ಆದರೆ, ಅಲ್ಲಿಂದ ಪುರುಷನ ಧ್ವನಿ ಕೇಳುತ್ತದೆ. ಇದರಿಂದ ವಿಚಲಿತಗೊಂಡ ಆಯೋಜಕ ಇದು ಪುರುಷನ ಧ್ವನಿ ಇದ್ದ ಹಾಗಿದೆ ಎಂದು ಕಾರ್ಯಕ್ರಮದ ಮಧ್ಯದಲ್ಲಿಯೇ ಹೇಳುತ್ತಾನೆ. ಇರಲಿ, ಆಕೆ ಸಂಪೂರ್ಣ ಮುಗ್ದೆಯಾಗಿಬಹುದು ಎಂದು ಹೇಳುತ್ತಾನೆ.
ಇನ್ನೊಮ್ಮೆ ಕರೆ ಮಾಡಿದಾಗ ಹೊಗಾನ್ ಪತ್ನಿ ಕರೆ ಸ್ವೀಕರಿಸುತ್ತಾಳೆ. ಫೋನ್ ಮಾಡಿದ ಉದ್ದೇಶ ತಿಳಿಸುವ ನಿರೂಪಕ ಬಳಿಕ ಮತ್ತೊಂದು ಎಡವಟ್ಟು ಮಾಡುತ್ತಾನೆ. ನಿಮ್ಮೊಂದಿಗೆ ಯಾರೂ ಇಲ್ಲ ಎಂದುಕೊಳ್ಳುತ್ತೇನೆ ಎಂದು ಕೇಳಿ ಮತ್ತಷ್ಟು ಮುಜುಗರ ಉಂಟು ಮಾಡುತ್ತಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ವ್ಯಂಗ್ಯವಾಡಿದ್ದಾರೆ. ಜತೆಗೆ ನಿರೂಪಕನನ್ನು ತರಾಟೆಗೂ ತೆಗೆದುಕೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಮೊದಲ ಬಾರಿ ಕರೆ ಮಾಡಿದಾಗ ಸಾರಿ..., ದೇರ್ ಇಸ್ ನೋ ಸರ್ವೀಸ್ ಎಂಬ ಧ್ವನಿಮುದ್ರಿತ ಸಂದೇಶ ಕೇಳಿದೆ. ಅದು ಪುರುಷನದ್ದಾಗಿತ್ತು. ಇದನ್ನು ಅರಿಯದೇ ನಿರೂಪಕ ಎಡವಟ್ಟು ಮಾಡಿದ್ದಾನೆ. ಕೊನೆಗೆ ಹೊಗಾನ್ 64,000 ಡಾಲರ್ (ಅಂದಾಜು 47 ಲಕ್ಷ ರೂ.) ಜಯಿಸಿದ್ದಾರೆ. ಆದರೆ, ಕಾರ್ಯಕ್ರಮದಿಂದಾದ ಮುಜುಗರ ಮಾತ್ರ ಅಷ್ಟಿಷ್ಟಲ್ಲ ಎಂದಿದ್ದಾರೆ.