

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಸದ್ಯ ಕ್ರಿಕೆಟ್ನಿಂದ ಬಿಡುವಿನಲ್ಲಿದ್ದಾರೆ. ಮದುವೆಯ ಕಾರಣದಿಂದಾಗಿ ಅವರು ಕ್ರಿಕೆಟ್ನಿಂದ ದೂರ ಉಳಿದಿದ್ದು, ಇಂಗ್ಲೆಂಡ್ ವಿರುದ್ಧದ ಕೊನೇ ಟೆಸ್ಟ್, ಟಿ20 ಮತ್ತು ಏಕದಿನ ಸರಣಿ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಬುಮ್ರಾ ಮದುವೆಯ ಬೆನ್ನಲ್ಲೇ ಹನಿಮೂನ್ಗೆ ಹೋಗಿರಬಹುದು ಎಂಬುದು ಕ್ರಿಕೆಟ್ ಪ್ರೇಮಿಗಳ ಲೆಕ್ಕಾಚಾರವಾಗಿತ್ತು. ಆದರೆ ಅವರ ಪತ್ನಿಯಾಗಿರುವ ಸ್ಟಾರ್ ಸ್ಪೋರ್ಟ್ಸ್ ಚಾನಲ್ನ ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಶುಕ್ರವಾರ ಭಾರತ-ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದ ವೇಳೆ ಕೆಲಸಕ್ಕೆ ಹಾಜರಾಗಿದ್ದರು. ಪಂದ್ಯದ ವೇಳೆ ಅವರ ನಿರೂಪಣೆ ಮಾಡಿದರು. ಇದರಿಂದ ಕ್ರಿಕೆಟ್ ಪ್ರೇಮಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ, ‘ಬುಮ್ರಾ ಯಾರ ಜತೆ ಹನಿಮೂನ್ಗೆ ಹೋದರು?’ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ!
ಕಳೆದ ಮಾರ್ಚ್ 15ರಂದು ಬುಮ್ರಾ ಗೋವಾದಲ್ಲಿ ಸಂಜನಾ ಗಣೇಶನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಬುಮ್ರಾ ಸಂಭ್ರಮ ಹಂಚಿಕೊಂಡಿದ್ದರು. ಬುಮ್ರಾ ಇನ್ನೂ ಹನಿಮೂನ್ ಮೂಡ್ನಲ್ಲಿರುವ ಕಾರಣ, ಭಾರತ-ಇಂಗ್ಲೆಂಡ್ ಏಕದಿನ ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದಾರೆ. ಆದರೆ ಸಂಜನಾ ಮದುವೆಯ ಬೆನ್ನಲ್ಲೇ ಕೆಲಸಕ್ಕೆ ಹಾಜರಾಗುವ ಮೂಲಕ ಅಚ್ಚರಿ ನೀಡಿದ್ದಾರೆ.
ಕ್ರಿಕೆಟ್ ಪ್ರೇಮಿಗಳು ಸಂಜನಾ ಅವರ ಕರ್ತವ್ಯನಿಷ್ಠೆಯ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬುಮ್ರಾ ಯಾಕೆ ಕ್ರಿಕೆಟ್ ಆಡಲು ಬಂದಿಲ್ಲ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಪಂದ್ಯದ ವೇಳೆ ಸಂಜನಾ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋಗೆ ಹಾಜರಾಗುವುದಾದರೆ, ಬುಮ್ರಾ ಯಾಕೆ ಮೈದಾನಕ್ಕೆ ಇಳಿದಿಲ್ಲ ಎಂಬ ಪ್ರಶ್ನೆಗಳ ಮೂಲಕವೂ ಕಾಲೆಳೆದಿದ್ದಾರೆ. ಬುಮ್ರಾ ಇನ್ನು ಏಪ್ರಿಲ್ 9ರಂದು ಆರಂಭವಾಗಲಿರುವ ಐಪಿಎಲ್ 14ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಮರಳಿ ಮೈದಾನಕ್ಕಿಳಿಯುವ ನಿರೀಕ್ಷೆ ಇದೆ.