

ಮುಂಬೈ: ಸುಶಾಂತ್ ಸಿಂಗ್ ಆತ್ಮಹತ್ಯೆಯ ನಂತರ ಅವರ ಕುರಿತಾದ 'ಸೂಸೈಡ್ ಆರ್ ಮರ್ಡರ್' ಎಂಬ ಚಿತ್ರದಲ್ಲಿ ಸಚಿನ್ ತಿವಾರಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಸುಶಾಂತ್ ಅವರ ನಿಧನವಾಗಿ ನಾಲ್ಕು ತಿಂಗಳಾಗುತ್ತಿವೆ. ಹೀಗಿರುವಾಗ ಬಯೋಪಿಕ್ ಯಾವ ಹಂತದಲ್ಲಿದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
ಪ್ರಮುಖವಾಗಿ ಸುಶಾಂತ್ ಅವರ ಜೀವನವನ್ನಾಧರಿಸಿ ಎರಡು ಚಿತ್ರಗಳು ಪ್ರಾರಂಭವಾಗಬೇಕಿತ್ತು. ಮೊದಲಿಗೆ, ಸುಶಾಂತ್ ಅವರ ತದ್ರೂಪಾಗಿದ್ದ ಸಚಿನ್ ಅಭಿನಯದಲ್ಲಿ ಮಾರುತ್ ಮತ್ತು ಸನೋಜ್ ಎಂಬ ನಿರ್ಮಾಪಕರು ಒಂದು ಚಿತ್ರ ಮಾಡಬೇಕು ಎಂದು ಹೊರಟಿದ್ದರು. ಸಚಿನ್ ಸಹ ಚಿತ್ರದಲ್ಲಿ ಸುಶಾಂತ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಆದರೆ, ಅದೇನಾಯಿತೋ ಗೊತ್ತಿಲ್ಲ. ಸಚಿನ್ ಸದ್ದಿಲ್ಲದೆ ಈ ಕಥೆಯನ್ನು ಇನ್ನೊಬ್ಬ ನಿರ್ಮಾಪಕರಿಗೆ ಲೀಕ್ ಮಾಡಿಬಿಟ್ಟರಂತೆ. ಸಚಿನ್ ಅವರಿಂದ ಕಥೆ ಕೇಳಿದ ನಿರ್ಮಾಪಕರು ಇನ್ನೊಂದು ಚಿತ್ರವನ್ನು ಘೋಷಿಸಿದ್ದಾರೆ. ಮುಂದೇನು ಮಾಡಬಹುದು ಎಂದು ಗೊತ್ತಾಗದ ಮೊದಲ ಚಿತ್ರದ ನಿರ್ಮಾಪಕರು, ಸಚಿನ್ ಮತ್ತು ಇನ್ನೊಂದು ಚಿತ್ರದ ನಿರ್ಮಾಪಕರ ಮೇಲೆ ಕೇಸ್ ಹಾಕುವ ಪ್ರಯತ್ನ ಮಾಡಿದ್ದರು.
ಈಗ ನೋಡಿದರೆ, ಎರಡೂ ಚಿತ್ರಗಳು ಆಗುವ ಸಾಧ್ಯತೆ ಕಾಣುತ್ತಿಲ್ಲ. ಮೂಲಗಳ ಪ್ರಕಾರ, ಸುಶಾಂತ್ ಅವರ ಕುಟುಂಬದವರು ಈ ವಿಷಯವಾಗಿ ಸ್ಟೇ ತಂದಿದ್ದು, ಅವರ ಅನುಮತಿ ಇಲ್ಲದೆ ಯಾರೂ ಸುಶಾಂತ್ ಕುರಿತಾಗಿ ಪುಸ್ತಕ ಬರೆಯುವುದಾಗಲೀ, ಸಿನಿಮಾ ಮಾಡುವುದಾಗಲೀ ಮಾಡುವಂತಿಲ್ಲವಂತೆ.
ಹಾಗಾಗಿ ಸುಶಾಂತ್ ಆತ್ಮಹತ್ಯೆ ಪ್ರಕರಣದ ಕುರಿತು ಸದ್ಯಕ್ಕಷ್ಟೇ ಅಲ್ಲ, ಯಾವಾಗಲಾದರೂ ಚಿತ್ರವಾಗಬಹುದು ಎಂಬ ನಿರೀಕ್ಷೆ ಯಾರಲ್ಲೂ ಇಲ್ಲ.